ಬಿಜೆಪಿ ನಾಯಕರಿಗೆ ಮಾನ, ಮರ್ಯಾದೆ ಇದ್ದರೆ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಲಿ: ಡಿಸಿಎಂ ಡಿ.ಕೆ. ಶಿವಕುಮಾರ್

Update: 2024-02-03 08:12 GMT

ಕಲಬುರಗಿ: ಬಿಜೆಪಿ ನಾಯಕರಿಗೆ ಮಾನ, ಮರ್ಯಾದೆ ಇದ್ದರೆ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲಿ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.

ಇಂದು ಕಲಬುರಗಿ ಮಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ಫೆ. 7 ರಂದು ಬಿಜೆಪಿ ನಾಯಕರು ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಬಿಜೆಪಿ ನಾಯಕರು ರಾಜ್ಯಕ್ಕೆ ನ್ಯಾಯ ಒದಗಿಸಲು ವಿಫಲವಾದ ಬಗ್ಗೆ ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ಅವರು ಒಂದು ದಿನವೂ ಪ್ರಧಾನಿ ಭೇಟಿ ಮಾಡಿ, ರಾಜ್ಯದ ಹಿತದ ಬಗ್ಗೆ ಧ್ವನಿ ಎತ್ತಲಿಲ್ಲ. ಮೊದಲು ಕೇಂದ್ರದ ಮೇಲೆ ಒತ್ತಡ ತಂದು ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಲಿ. ಇದೇ ಕಾರಣಕ್ಕೆ ರಾಜ್ಯದ ಜನ ಅವರನ್ನು ಧಿಕ್ಕರಿಸಿದ್ದಾರೆ." ಎಂದು ಹೇಳಿದರು.

ದಿಲ್ಲಿಯಲ್ಲಿ ಪ್ರತಿಭಟನೆ

ಬರಗಾಲದಲ್ಲಿ ಕೇಂದ್ರ ಸರಕಾರ ರಾಜ್ಯಕ್ಕೆ ಪರಿಹಾರ ನೀಡದಿರುವುದು, ಬಜೆಟ್ ನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ, ಈ ಹಿಂದಿನ ಬಜೆಟ್ ನಲ್ಲಿ ಘೋಷಣೆ ಮಾಡಿದ ಅನುದಾನ ಬಿಡುಗಡೆ ಮಾಡದಿರುವುದರ ವಿರುದ್ಧ ಫೆ. 7ರಂದು ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಎಲ್ಲಾ ಸಚಿವರು, ಶಾಸಕರು, ಸಂಸದರು ಇದೇ ಮೊದಲ ಬಾರಿಗೆ ಇಂತಹ ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ನಮ್ಮಲ್ಲಿ ಅಸ್ಪೃಶ್ಯತೆ ಇಲ್ಲ:

ಜಾತಿ ಕಾರಣಕ್ಕೆ ಸ್ವಾಮೀಜಿಗಳಿಗೆ ಗರ್ಭಗುಡಿಗೆ ಪ್ರವೇಶ ನಿರಾಕರಣೆ ಬಗ್ಗೆ ಕೇಳಿದಾಗ, "ಈ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೆ. ಸಾಮಾನ್ಯವಾಗಿ ದೇವಾಲಯಗಳನ್ನು ಬೆಳಗ್ಗೆ ಮತ್ತು ಸಂಜೆ ವೇಳೆ ಸ್ವಚ್ಛ ಮಾಡುವುದು ಸಹಜ. ಈ ಪ್ರಕರಣದಲ್ಲಿ ಏನು ಉದ್ದೇಶ ಇದೆ ಎಂದು ಜಿಲ್ಲಾ ಸಚಿವರು, ಮುಜರಾಯಿ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ. ನಮ್ಮಲ್ಲಿ ಇಂತಹ ಅಸ್ಪೃಶ್ಯತೆ ಇಲ್ಲ. ನಾವೆಲ್ಲರೂ ಒಂದೇ. ಮಾನವೀಯತೆಯಿಂದ ಎಲ್ಲರೂ ಒಟ್ಟಾಗಿ ಬದುಕಬೇಕು. ಎಲ್ಲಾ ಧರ್ಮದವರಿಗೂ ದೇವಾಲಯಗಳಲ್ಲಿ ಅವಕಾಶ ನೀಡುತ್ತೇವೆ" ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವ ಶರಣ ಪ್ರಕಾಶ್ ಪಾಟೀಲ್, ಶಾಸಕ ಅಲ್ಲಮಪ್ರಭು ಪಾಟೀಲ್, ಮಾಜಿ ಸಚಿವ ರೇವುನಾಯಕ ಬೆಳಮಗಿ, ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಜಗದೇವ್ ಗುತ್ತೇದಾರ ಸೇರಿದಂತೆ ಹಲವರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News