ಎನ್‍ಇಪಿ ಜಾರಿ ಮಾಡದಿದ್ದರೆ ಕೇಂದ್ರ ಸರಕಾರ ಅನುದಾನ ನಿಲ್ಲಿಸಲು ಸಾಧ್ಯವಿಲ್ಲ: ಸಚಿವ ಎಂ.ಸಿ. ಸುಧಾಕರ್ ಸ್ಪಷ್ಟನೆ
ಬೆಂಗಳೂರು : ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿ ಮಾಡದಿದ್ದರೆ ಕೇಂದ್ರ ಸರಕಾರ ಅನುದಾನ ನಿಲ್ಲಿಸಲು ಸಾಧ್ಯವಿಲ್ಲ. ನಮ್ಮ ಮೇಲೆ ಒತ್ತಡ ಹಾಕುವುದು ಕೂಡ ಸರಿಯಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಇಲ್ಲಿನ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‍ನ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳ ಹಾಗೂ ತಮಿಳುನಾಡು ಈಗಾಗಲೇ ತಮಗೆ ಅನುಕೂಲವಾಗುವಂತಹ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ. ಅವಶ್ಯಕತೆ ಇರುವಂತೆ ಯುಜಿಸಿ ಮಾರ್ಗಸೂಚಿಗಳನ್ನೂ ಪಾಲಿಸಿದ್ದಾರೆ. ಆದರೆ ಕೇಂದ್ರ ಸರಕಾರ ಅನುದಾನ ಕಡಿತ ಮಾಡಿಲ್ಲ ಎಂದರು.
ಉನ್ನತ ಶಿಕ್ಷಣಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ಪ್ರತಿವರ್ಷ ಅನುದಾನ ಕೊಡುತ್ತಿಲ್ಲ. 5 ವರ್ಷಕ್ಕೊಮ್ಮೆ ಮಾತ್ರ ಅನುದಾನ ನೀಡುತ್ತಿದೆ. ಅದರಲ್ಲಿ ಕೇಂದ್ರದ ಪಾಲು ಶೇ.60 ಆದರೆ ರಾಜ್ಯ ಸರಕಾರದ ಪಾಲು ಶೇ.40 ಆಗಿರುತ್ತದೆ. ಹಾಗಾಗಿ ಒತ್ತಡ ಪ್ರಕ್ರಿಯೆ ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.