ದೇಶ ಸುರಕ್ಷಿತವಾಗಿ‌ ಉಳಿಯಬೇಕಾದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು: ಮಲ್ಲಿಕಾರ್ಜುನ ಖರ್ಗೆ

Update: 2023-08-05 10:02 GMT

ಕಲಬುರಗಿ: ರಾಜ್ಯ ಸರ್ಕಾದ ಐದು ಗ್ಯಾರಂಟಿಗಳ ಬಗ್ಗೆ ಇಡೀ ದೇಶದ ಜನರೇ ಶ್ಲಾಘನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಶಿವಕುಮಾರ ನೇತೃತ್ವದಲ್ಲಿ ಈ ಗ್ಯಾರಂಟಿಗಳು ಜಾರಿಗೆ ಬರುತ್ತಿವೆ ಎಂದು ಲೋಕಸಭಾ ವಿರೋಧಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಗೃಹ ಜ್ಯೋತಿ ಯೋಜನೆಯ ಚಾಲನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಬಡವರಿಗಾಗಿ, ಯುವಕರಿಗಾಗಿ, ಕೂಲಿ ಕಾರ್ಮಿಕರಿಗಾಗಿ, ಮಹಿಳೆಯರಿಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ‌ ಬಂದಾಗೆಲ್ಲ ಜಾರಿಗೆ ತಂದಿದೆ. ಅಂತಹ ಯೋಜನೆಗಳನ್ನು ಸಿಎಂ ಸಿದ್ದರಾಮಯ್ಯ ಈ‌ ಹಿಂದಿನ ಅವಧಿಯಲ್ಲಿ ಜಾರಿಗೆ ತಂದರೂ ಕೂಡಾ ಜನರು ಯಾಕೋ ಆಶೀರ್ವಾದ ಮಾಡಲಿಲ್ಲ ಎಂದರು.

ಮನಸಿದ್ದರೆ ಮಾರ್ಗ ಸಿಗುತ್ತದೆ. ಯಾರು ಬಡವರ ಬಗ್ಗೆ ಚಿಂತನೆ ಮಾಡುತ್ತಾರೋ‌ ಅವರು ಯೋಜನೆಗಳನ್ನು ಜಾರಿಗೆ ತರಲು ದುಡ್ಡು ಹುಡುಕುತ್ತಾರೆ ಎಂದು ಹೇಳಿ ಸಿಎಂ, ಡಿಸಿಎಂ ಹಾಗೂ ಇಂಧನ ಸಚಿವರಿಗೆ ಮೆಚ್ಚುಗೆ ಸೂಸಿ‌ ಅಭಿನಂದನೆ ಸಲ್ಲಿಸಿದರು.

 ರಾಜ್ಯ ಕಾಂಗ್ರೆಸ್ ಸರ್ಕಾರವನ್ನು‌ ನುಡಿದಂತೆ ನಡೆದ ಸರ್ಕಾರ ಎಂದು ಪ್ರಶಂಸಿಸಿದ ಖರ್ಗೆ ಅವರು ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. " ಪ್ರತಿ ವರ್ಷ 2 ಕೋಟಿ ಉದ್ಯೋಗ, ವಿದೇಶದಿಂದ ಕಪ್ಪು ಹಣ ವಾಪಸ್ ತಂದು ಪ್ರತಿ ಕುಟುಂಬಕ್ಕೆ ಹದಿನೈದು ಲಕ್ಷ ಕೊಡುವುದಾಗಿ ಹೇಳಿದ್ದರು. ಎಲ್ಲಿ ಹದಿನೈದು ಲಕ್ಷ ಎಲ್ಲಿ ಹೋಯಿತು? ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ ಅವರು ತಮ್ಮ ಬಳಿ ಇರುವ ಇಂಟಲಿಜೆನ್ಸಿ ಮೂಲಕ ವರದಿ ತರಿಸಿಕೊಂಡು ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿರುವ ಬಗ್ಗೆ ತಿಳಿದುಕೊಳ್ಳಲಿ ಎಂದು ಟಾಂಗ್ ನೀಡಿದ ಖರ್ಗೆ, ಗ್ಯಾರಂಟಿಗಳನ್ನು ಜಾರಿಗೊಳಿಸಿದರೆ ರಾಜ್ಯ ಸರ್ಕಾರ ದಿವಾಳಿಯಾಗಲಿದೆ ಎಂದು ಮೋದಿ ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದರು ಎಂದು ನೆನಪಿಸಿಕೊಂಡರು.

ಈ‌ ದೇಶ ಸುರಕ್ಷಿತವಾಗಿ‌ ಉಳಿಯಬೇಕಾದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಒತ್ತಿ ಹೇಳಿದ ಖರ್ಗೆ ಅವರು ಬಡವರ, ಮಹಿಳೆಯರ, ದೀನ ದಲಿತರ ಹಾಗೂ ಸಂವಿಧಾನದ ಉಳಿವಿಗಾಗಿ ಜನರು ಕಾಂಗ್ರೆಸ್ ಪಕ್ಷವನ್ನು ಆಶೀರ್ವದಿಸಬೇಕು ಎಂದರು.

ಕಲ್ಯಾಣ ಕರ್ನಾಟಕದ ಜನರಿಗೆ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಮುಂದುವರೆಯಬೇಕು ಹಾಗೆ ಮುಂದುವರೆಯಲು ಅವರಿಗೆ ಧೈರ್ಯದ ಕೊರತೆ‌ ಇಲ್ಲ. ನಾನು ಕೂಡಾ ವಿದ್ಯಾರ್ಥಿ ದೆಸೆಯಿಂದಲೇ ಇದೇ ಎನ್ ವಿ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ನ ಮಹಾನ್ ನಾಯಕರು ಮಾಡಿದ ಭಾಷಣ ಕೇಳಿದ್ದೇನೆ ಎಂದು ತಮ್ಮ‌ ವಿದ್ಯಾರ್ಥಿ ಜೀವನ ಮೆಲುಕು ಹಾಕಿ ಆರ್ಟಿಕಲ್ 371 J ಅಡಿಯಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಪ್ರತಿಪಾದಿಸಿದರು.

ಕಲ್ಯಾಣ ಕರ್ನಾಟಕದ ಬಗ್ಗೆ ಕಾಳಜಿ ವಹಿಸುವಂತೆ ಸಿಎಂ ಹಾಗೂ ಡಿಸಿಎಂ ಗೆ ಹೇಳಿದ ಅವರು ಈ ಭಾಗದಿಂದ‌ ನಿಮಗೆ ಯಾವಾಗಲೂ 25 ಸೀಟು ಬಂದಿವೆ. ಕಕ ಭಾಗದಲ್ಲಿ ಏನು ಅಭಿವೃದ್ದಿ ಮಾಡಬೇಕು ಎನ್ನುವುದರ ಬಗ್ಗೆ ನೀವಿಬ್ಬರೂ ಆಗಾಗ ಪ್ರಗತಿ ಪರಿಶೀಲನೆ ಮಾಡಬೇಕು.‌ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸೇರಿದಂತೆ ಈ ಭಾಗದ ಸಮಗ್ರ ಅಭಿವೃದ್ದಿಗೆ ಒತ್ತು ನೀಡಬೇಕು.‌ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ವಿಶೇಷ ಒತ್ತು ನೀಡಬೇಕು. ಬೀದರ್, ಕಲಬುರಗಿ, ಯಾದಗಿರಿ,‌ಕೊಪ್ಪಳ ಜಿಲ್ಲೆಗಳು ಸೇರಿದಂತೆ ಕಕ ಭಾಗದ ಎಲ್ಲ ಜಿಲ್ಲೆಗಳು ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ ತಳಮಟ್ಟದಲ್ಲಿವೆ. ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News