ರಾಜ್ಯದಲ್ಲಿ ಅಭಿವೃದ್ದಿಯ ಜತೆಗೆ ಗ್ಯಾರೆಂಟಿ ಯೋಜನೆಗಳ ಜಾರಿ: ಸಿಎಂ ಸಿದ್ದರಾಮಯ್ಯ

Update: 2025-04-27 20:03 IST
ರಾಜ್ಯದಲ್ಲಿ ಅಭಿವೃದ್ದಿಯ ಜತೆಗೆ ಗ್ಯಾರೆಂಟಿ ಯೋಜನೆಗಳ ಜಾರಿ: ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ

  • whatsapp icon

ಬೆಂಗಳೂರು: ಅಭಿವೃದ್ದಿ ಯೋಜನೆಗಳ ಅನುಷ್ಟಾನದೊಂದಿಗೆ ರಾಜ್ಯದ ಅಭಿವೃದ್ದಿಯನ್ನು ಮಾಡಿದ್ದೇವೆ. ಜೊತೆಗೆ ರಾಜ್ಯದ ಜನತೆಗೆ ಐದು ಗ್ಯಾರೆಂಟಿ ಯೋಜನೆಗಳನ್ನೂ ಜಾರಿ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ರವಿವಾರ ನಗರದ ಹೊರವಲಯದಲ್ಲಿರುವ ದೇವನಹಳ್ಳಿಯ ಭೈರದೇನಹಳ್ಳಿ ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿ ಆಯೋಜಿಸಿದ್ದ ಸರಕಾರದ ಎರಡು ವರ್ಷದ ಸಾಧನೆ ಸಮಾವೇಶ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದರೆ ಗ್ಯಾರೆಂಟಿ ಯೋಜನೆಗಳನ್ನು ಮೊದಲ ಕ್ಯಾಬಿನೆಟ್‍ನಲ್ಲಿಯೇ ಚರ್ಚೆ ಮಾಡಿ ಜಾರಿ ಮಾಡುತ್ತೇವೆ ಎಂದು ಚುನಾವಣೆಗೂ ಮೊದಲು ರಾಜ್ಯದ ಜನತೆಗೆ ಭರವಸೆ ನೀಡಲಾಗಿತ್ತು. ಅದರಂತೆ ರಾಜ್ಯದಲ್ಲಿ ಐದು ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಇಲ್ಲಿಯವರೆಗೆ ಗ್ಯಾರಂಟಿಗಳ ಮೂಲಕ ಸುಮಾರು 80 ಸಾವಿರ ಕೋಟಿ ರೂ.ಗಳನ್ನು ಜನರ ಜೇಬಿಗೆ ಹಾಕಿದ್ದೇವೆ ಎಂದು ಅವರು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಂದು ಸಾವಿರ ಕೋಟಿ ರೂಪಾಯಿಗಳ ವೆಚ್ಚದ ಕಾಮಗಾರಿಗಳಿಗೆ ಒಂದೇ ದಿನ ಚಾಲನೆ ನೀಡಿದ್ದೇವೆ. ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ಬಿಜೆಪಿ ಪರಿವಾರದ ಸುಳ್ಳುಗಳಿಗೆ ಅಭಿವೃದ್ಧಿ ಮೂಲಕವೇ ಉತ್ತರ ನೀಡುತ್ತಿದ್ದೇವೆ. ದಿವಾಳಿಯಾಗಿರುವ ರಾಜ್ಯ ಸರಕಾರವು 30 ಸಾವಿರ ಕೋಟಿ ರೂಪಾಯಿಗಿಂತಲೂ ಅಧಿಕ ಮೊತ್ತದ ಬಜೆಟ್ ಅನ್ನು ಮಂಡಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಟೀಕಿಸಿತ್ತು. ಆದರೆ 2025-26ನೆ ಸಾಲಿನಲ್ಲಿ 4,08,647ಕೋಟಿ ರೂ.ಗಳ ಬಜೆಟ್ ಮಂಡಿಸಿದ್ದೇವೆ ಎಂದು ಅವರು ತಿಳಿಸಿದರು.

ಬಜೆಟ್‍ನಲ್ಲಿ ಬಂಡವಾಳ ವೆಚ್ಚಕ್ಕಾಗಿ(ಕ್ಯಾಪಿಟಲ್ ಎಕ್ಸ್‍ಪೆಂಡಿಚರ್ಸ್) 80 ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಮೀಸಲಿಡಲಾಗಿದೆ. ಗ್ಯಾರೆಂಟಿ ಯೋಜನೆಗಳಿಗಾಗಿ 50 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಅಂದರೆ ಒಟ್ಟು 1.33 ಲಕ್ಷ ಕೋಟಿ ರೂ.ಗಳನ್ನು ಯೋಜನೆಗಳಿಗಾಗಿಯೇ ಮೀಸಲಿಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಇಂದು ಎಲ್ಲ ವಸ್ತುಗಳ ಬೆಲೆ ಏರಿಕೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವೇ ಕಾರಣವಾಗಿದೆ. ಡೀಸೆಲ್, ಪೆಟ್ರೋಲ್, ಗ್ಯಾಸ್ ಬೆಲೆಯನ್ನು ಕೇಂದ್ರ ಸರಕಾರವು ಏರಿಕೆ ಮಾಡಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯಿಲ್ ಬೆಲೆ ಕಡಿಮೆಯಾದರೂ ದೇಶದಲ್ಲಿ ಡೀಸೆಲ್, ಪೆಟ್ರೋಲ್, ಗ್ಯಾಸ್ ಬೆಲೆಯನ್ನು ಕೇಂದ್ರ ಸರಕಾರ ಇಳಿಕೆ ಮಾಡಿಲ್ಲ. ರಾಜ್ಯ ಬಿಜೆಪಿ ಜನಾಕ್ರೋಶ ಯಾತ್ರೆಯನ್ನು ನಡೆಸಿದ ದಿನದಂದು ಕೇಂದ್ರ ಬಿಜೆಪಿ ಸರಕಾರ ಇಂಧನ ಬೆಲಯನ್ನು ಹೆಚ್ಚಳ ಮಾಡಿದೆ ಎಂದು ಅವರು ಟೀಕಿಸಿದರು.

ಬಿಜೆಪಿ ಕನ್ನಡಕದ ಗಾಜುಗಳು ಅವರ ಅಧಿಕಾರಾವಧಿಯ ಕಲೆಗಳಿಂದ ಕೂಡಿದೆ. ಅದಕ್ಕೇ ಅವರು ನೋಡುವ ಕಡೆಯಲ್ಲೆಲ್ಲಾ ಕಲೆಗಳೇ ಕಾಣುತ್ತಿವೆ. ಬಿಜೆಪಿ ತನ್ನ ಕನ್ನಡಕ ಕ್ಲೀನ್ ಮಾಡಿಕೊಂಡರೆ ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಕಾಣುತ್ತದೆ ಎಂದು ಟೀಕಿಸಿದ ಸಿದ್ದರಾಮಯ್ಯ, ರಾಜದಲ್ಲಿ ಬಿಜೆಪಿ ಪಕ್ಷವು ಪೂರ್ಣ ಬಹುಮತದ ಮೂಲಕ ಅಧಿಕಾರಕ್ಕೆ ಬಂದಿಲ್ಲ. ರಾಜ್ಯದ ಜನತೆಯು ಬಿಜೆಪಿಗೆ ಆಶೀರ್ವಾದವನ್ನು ನೀಡಿಲ್ಲ. ಹಿಂಬಾಗಿಲಿನ ಮೂಲಕವೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಿಕ್ಕೆ ಬಂದಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಕೆ.ಎಚ್. ಮುನಿಯಪ್ಪ, ಡಾ.ಎಚ್.ಸಿ.ಮಹದೇವಪ್ಪ, ಬಿ.ಝೆಡ್.ಝಮೀರ್ ಅಹ್ಮದ್ ಖಾನ್, ಕೃಷ್ಣ ಬೈರೇಗೌಡ, ಭೋಸರಾಜ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ಶಾಸಕರಾದ ಶರತ್ ಬಚ್ಚೇಗೌಡ, ನೆಲಮಂಗಲ ಶ್ರೀನಿವಾಸ್, ಎಂಎಲ್ಸಿ ಎಸ್.ರವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಂದಿಬೆಟ್ಟದಲ್ಲಿ ಮುಂದಿನ ಸಂಪುಟ ಸಭೆ: ‘ಮುಂದಿನ ಸಚಿವ ಸಂಪುಟ ಸಭೆಯನ್ನು ನಂದಿಬೆಟ್ಟದಲ್ಲಿ ಮಾಡಲು ಚಿಂತನೆ ನಡೆದಿದೆ. ರಾಜ್ಯದ ಎಲ್ಲ ವಿಭಾಗಗಳಲ್ಲಿಯೂ ಸಂಪುಟ ಸಭೆಗಳನ್ನು ಆಯೋಜಿಸಲು ರಾಜ್ಯ ಸರಕಾರ ಕ್ರಮ ವಹಿಸುತ್ತಿದೆ. ಈಗಾಗಲೇ ಕಲಬುರಗಿ ಮತ್ತು ಮೈಸೂರು ವಿಭಾಗಗಳಲ್ಲಿ ಸಂಪುಟ ಸಭೆ ನಡೆದಿದೆ. ಬೆಂಗಳೂರು ವಿಭಾಗದ ನಂದಿಬೆಟ್ಟದಲ್ಲಿ ಮುಂದಿನ ಸಂಪುಟ ಸಭೆ ನಡೆಯಲಿದ್ದು, ಜನಪ್ರತಿನಿಧಿಗಳು ಇಂದು ಮಂಡಿಸಿದ ಬೇಡಿಕೆಗಳನ್ನು ಸಭೆಯಲ್ಲಿ ಚರ್ಚಿಸಲಾಗುತ್ತದೆ. ಇನ್ನು ಬೆಳಗಾವಿ ವಿಭಾಗಕ್ಕೆ ಸಂಬಂಧಿಸಿ ವಿಜಯಪುರದಲ್ಲಿ ಸಂಪುಟ ಸಭೆ ನಡೆಸಲಾಗುವುದು.

-ಸಿದ್ದರಾಮಯ್ಯ, ಮುಖ್ಯಮಂತ್ರಿ

ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಹಿಂದುಳಿದವರಗೆ ಸೇರಿ ಎಲ್ಲ ವರ್ಗದವರೆಗೂ ಅನುಕೂಲವಾಗಿದೆ. ಆದರೆ ವಿರೋಧ ಪಕ್ಷದವರು ಸುಖಾಸುಮ್ಮನೆ ಪ್ರತಿಭಟನೆ ಮಾಡುತ್ತಿದ್ದಾರೆ. ಕುಟುಂಬದ ಯಶಸ್ಸು, ಜೀವನದ ಯಶಸ್ಸಿಗೆ ನಾವು ಗ್ಯಾರಂಟಿಗಳನ್ನು ನೀಡಿದ್ದೇವೆ. ಎತ್ತಿನಹೊಳೆ ನೀರನ್ನು ಬಯಲು ಸೀಮೆ ಪ್ರದೇಶಗಳಿಗೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಆದಷ್ಟು ಬೇಗ ಹರಿಸಲಾಗುವುದು.

-ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ

‘ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಿಎಸ್‍ಆರ್ ಅನುದಾನದ ಮೂಲಕ 150ಕೋಟಿ ರೂ.ವೆಚ್ಚದಲ್ಲಿ ಶಾಲೆಗಳು ಅಭಿವೃದ್ಧಿ ಮಾಡಲಾಗುತ್ತಿದೆ. ಹಾಗೆಯೇ ಜಿಲ್ಲೆಯ 2.50ಲಕ್ಷ ಕುಟುಂಬಗಳ ಪೈಕಿ ಕುಟುಂಬ ಸದಸ್ಯರೊಬ್ಬರಿಗೆ ಉದ್ಯೋಗ ಕೊಡಿಸುವ ಉದ್ದೇಶ ಹೊಂದಿದ್ದು, ಮೊದಲ ಹಂತದಲ್ಲಿ 5ಸಾವಿರ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಮೇಳದ ಮೂಲಕ ಕೆಲಸ ಕೊಡಿಸಿದ್ದೇವೆ’

-ಕೆ.ಎಚ್. ಮುನಿಯಪ್ಪ, ಆಹಾರ ಸಚಿವ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News