ಸೈಬರ್ ಅಪರಾಧಗಳಿಗೆ ಕಡಿವಾಣ : ದೇಶದ ಮೊದಲ ಸೈಬರ್ ಕಮಾಂಡ್ ಸೆಂಟರ್ ಕರ್ನಾಟಕದಲ್ಲಿ ಆರಂಭ
ಸಾಂದರ್ಭಿಕ ಚಿತ್ರ | PC : freepik.com
ಬೆಂಗಳೂರು: ಸೈಬರ್ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯ ಸರಕಾರವೂ ದೇಶದ ಮೊದಲ ಸೈಬರ್ ಕಮಾಂಡ್ ಸೆಂಟರ್ ತನಿಖಾ ಘಟಕ ಆರಂಭಿಸಿದ್ದು, ಇದು ದೇಶದಲ್ಲಿಯೇ ಮೊತ್ತ ಮೊದಲ ಸೈಬರ್ ಕಮಾಂಡ್ ಸೆಂಟರ್ ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆ ಪಾತ್ರವಾಗಿದೆ.
ಈ ಹಿಂದೆ ಸೈಬರ್ ಅಪರಾಧ ಮತ್ತು ಮಾದಕ ದ್ರವ್ಯ ವಿಭಾಗವು ಅಪರಾಧ ತನಿಖಾ ವಿಭಾಗದ (ಸಿಐಡಿ) ಭಾಗವಾಗಿತ್ತು. ಇದೀಗ ಪ್ರತ್ಯೇಕ ವಿಭಾಗವಾಗಿ ಕಾರ್ಯಾಚರಿಸಲಿದ್ದು, ಲಭ್ಯವಿರುವ ಮೂಲಸೌಕರ್ಯ ಮತ್ತು ಮಾನವಶಕ್ತಿಯನ್ನು ಬಳಸಿಕೊಂಡು ಸೈಬರ್ ಕಮಾಂಡ್ ಅನ್ನು ಸ್ಥಾಪಿಸಲಾಗಿದೆ.
ಈಗಾಗಲೇ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಅಸ್ತಿತ್ವದಲ್ಲಿರುವ 43 ಸಿಇಎನ್ (ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ) ಪೊಲೀಸ್ ಠಾಣೆಗಳನ್ನು ಇದು ಒಳಗೊಂಡಿರಲಿದೆ. ಇವುಗಳನ್ನು ಸೈಬರ್ ಅಪರಾಧ ಪೊಲೀಸ್ ಠಾಣೆಗಳಾಗಿ ಮರುನಾಮಕರಣ ಮಾಡಲಾಗುತ್ತದೆ.
ಇದಲ್ಲದೆ, ಡಿಜಿಪಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈಬರ್ ಅಪರಾಧ ಪೊಲೀಸ್ ಠಾಣೆಗಳು, ರಾಜ್ಯ ಮಟ್ಟದ ಅಧಿಕಾರ ವ್ಯಾಪ್ತಿಯೊಂದಿಗೆ ಸಿಐಡಿ, ಹಾಗೆಯೇ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈಬರ್ ಕಮಾಂಡ್ ಘಟಕವನ್ನು ಸಹ ಈ ಸೈಬರ್ ಕಮಾಂಡ್ ಸೆಂಟರ್ ನ ವ್ಯಾಪ್ತಿಗೆ ತರಲಾಗುತ್ತದೆ.
ಹೀಗೆ ಒಟ್ಟು 45 ಪೊಲೀಸ್ ಠಾಣೆಗಳನ್ನು ಈ ವಿಶೇಷ ಘಟಕದ ವ್ಯಾಪ್ತಿಗೆ ತರಲಾಗುತ್ತದೆ. ಪ್ರಸ್ತುತ ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ದಾಖಲಾಗಿರುವ ಒಟ್ಟು ಅಪರಾಧ ಪ್ರಕರಣಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳ ಪ್ರಮಾಣವೇ ಸರಿಸುಮಾರು ಶೇ.20ರಷ್ಟಿದೆ. ಇವುಗಳ ನಿರ್ವಹಣೆಗೆ ಈ ಸೈಬರ್ ಕಮಾಂಡ್ ಸೆಂಟರ್ ನಿಂದ ಅನುಕೂಲವಾಗಲಿದೆ ಎಂದು ಸರಕಾರ ಹೇಳಿದೆ.
ಇನ್ನೂ, ನೂತನ ಸೈಬರ್ ಕಮಾಂಡ್ ಸೆಂಟರ್ ಅನ್ನು ಪೊಲೀಸ್ ಮಹಾನಿರ್ದೇಶಕರಾಗಿ 1994 ಬ್ಯಾಚ್‍ನ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಆಂತರಿಕ ಭದ್ರತಾ ವಿಭಾಗ (ಐಎಸ್‍ಡಿ)ದ ಡಿಜಿಪಿ, ಪೊಲೀಸ್ ಕಂಪ್ಯೂಟರ್ ವಿಂಗ್ (ಪಿಸಿಡಬ್ಲ್ಯೂ) ಮತ್ತು ಸೈಬರ್ ಅಪರಾಧ ಮತ್ತು ಮಾದಕ ದ್ರವ್ಯ (ಸಿ&ಎನ್) ವಿಭಾಗವನ್ನು ಮುನ್ನಡೆಸುತ್ತಿರುವ ಪ್ರಣವ್ ಮೊಹಾಂತಿ ಅವರನ್ನು ಈ ಸೈಬರ್ ಕಮಾಂಡ್‍ನ ಡಿಜಿ ಆಗಿ ನೇಮಕ ಮಾಡಲಾಗಿದೆ.
ಸೈಬರ್ ಭದ್ರತೆ, ಸೈಬರ್ ಅಪರಾಧ, ರಾನ್ಸಮ್‍ವೇರ್, ಹಿಂಬಾಲಿಸುವುದು, ಮಹಿಳೆಯರು ಮತ್ತು ಮಕ್ಕಳ ಮೇಲಿನ ಆನ್‍ಲೈನ್ ಅಪರಾಧಗಳು, ಡಿಜಿಟಲ್ ಅರೆಸ್ಟ್ ಸೇರಿದಂತೆ ಸೈಬರ್ ವಂಚನೆಗಳು, ಡೀಪ್‍ಫೇಕ್‍ಗಳು, ಹ್ಯಾಕಿಂಗ್, ಡೇಟಾ ಉಲ್ಲಂಘನೆ, ತಪ್ಪು ಮಾಹಿತಿ ಇತ್ಯಾದಿಗಳ ವಿರುದ್ಧ ಸೈಬರ್ ಕಮಾಂಡ್ ಸೆಂಟರ್ ಕಾರ್ಯಾಚರಣೆ ನಡೆಸಲಿದೆ.
4 ವರ್ಷಗಳಲ್ಲಿ 50 ಸಾವಿರ ಪ್ರಕರಣ..!
ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕದಲ್ಲಿ ಸುಮಾರು 52,000 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿದ್ದು, ಇದು ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು. ಈ ಹಿನ್ನೆಲೆಯಲ್ಲಿ ಸೈಬರ್ ಕಮಾಂಡ್ ಕೇಂದ್ರ ಸ್ಥಾಪಿಸಲಾಗಿದ್ದು, ಅರಮನೆ ರಸ್ತೆಯಲ್ಲಿರುವ ಸಿಐಡಿ ಕಟ್ಟಡದಲ್ಲಿ ಇದರ ಪ್ರಧಾನ ಕಚೇರಿ ಸ್ಥಾಪಿಸಲಾಗಿದೆ.