ಮೋದಿ ಸ್ವ ಘೋಷಿತ ದೇವಮಾನವರಾಗಲು ಹೊರಟಿದ್ದಾರೆಯೇ?: ದಿನೇಶ್ ಗುಂಡೂರಾವ್ ಪ್ರಶ್ನೆ

Update: 2024-05-22 16:32 GMT

ಬೆಂಗಳೂರು: ಸ್ವ ಘೋಷಿತ ವಿಶ್ವಗುರು ‘ಮೋದಿ’ಯವರು ಈಗ ಸ್ವ ಘೋಷಿತ ದೇವಮಾನವರಾಗಲು ಹೊರಟಿದ್ದಾರೆಯೇ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಪುರಿ ಜಗನ್ನಾಥನೇ ಪ್ರಧಾನಿ ಮೋದಿ ಭಕ್ತ ಎಂಬ ಸಂಬಿತ್ ಪಾತ್ರ ಹೇಳಿಕೆಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಿರುಗೇಟು ನೀಡಿದ ಅವರು, ಸಂಬಿತ್ ಪಾತ್ರ ಹೇಳಿಕೆ ವ್ಯಕ್ತಿ ಪೂಜೆಯ ಅಸಹ್ಯದ ಪರಮಾವಧಿ. ತನ್ನನ್ನು ತಾನು ದೇವರೆಂದು ಭಾವಿಸಿಕೊಳ್ಳುವ, ಹಾಗೂ ತನ್ನ ಅನುಯಾಯಿಗಳಲ್ಲೂ ತಾನು ದೇವರ ಅಪರವತಾರ ಎಂಬ ಭ್ರಮೆ ಹುಟ್ಟಿಸುವ ಮಾನಸಿಕ ರೋಗವೊಂದು ಸರ್ವೇ ಸಾಧಾರಣವಾಗಿ ಸರ್ವಾಧಿಕಾರಿಗಳಲ್ಲಿ ಕಂಡು ಬರುವ ಲಕ್ಷಣ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇತಿಹಾಸದಲ್ಲಿ ಹಿಟ್ಲರ್ ಹಾಗೂ ಮುಸಲೋನಿ ಕೂಡ ತಮ್ಮನ್ನು ತಾವು ದೇವರೆಂದು ಭಾವಿಸಿಕೊಂಡಿದ್ದರು. ಹಿಟ್ಲರ್, ಮುಸಲೋನಿಯ ಅನುಯಾಯಿಗಳು ತಮ್ಮ ನಾಯಕರನ್ನು ದೇವರ ಅವತಾರವೇ ಎಂಬಂತೆ ಪ್ರಚಾರ ಮಾಡುತ್ತಿದ್ದರು. ‘ಹಿಸ್ಟರಿ ರಿಪಿಟ್ಸ್’ ಎಂಬಂತೆ ಈಗ ಮೋದಿಯವರ ಅಂಧ ಭಕ್ತರು ದೇವರೇ ಮೋದಿಯವರ ಭಕ್ತ ಎಂದು ಹೇಳುವ ಮೂಲಕ ಹಿಟ್ಲರ್ ಹಾಗೂ ಮುಸಲೋನಿಯ ಇತಿಹಾಸ ನೆನಪಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ದೇವರಿಗಿಂತ ದೊಡ್ಡವರಿಲ್ಲ ಎಂಬುದು ಅನುಭವಸ್ಥರ ಮಾತು. ಆದರೆ ಬಿಜೆಪಿಯಲ್ಲಿ ಮೋದಿಗಿಂತ ದೇವರೇ ಇಲ್ಲ ಎಂಬ ಭ್ರಾಮಕ ಸ್ಥಿತಿಯಿದೆ. ವಿಷ್ಣುವಿನ ಮತ್ತೊಂದು ರೂಪವಾಗಿ ಆರಾಧಿಸಲ್ಪಡುವ ಪುರಿ ಜಗನ್ನಾಥ ಕೋಟ್ಯಂತರ ಭಕ್ತರ ಪಾಲಿನ ಇಷ್ಟ ದೇವರು. ಜೊತೆಗೆ ಒಡಿಶಾದ ಅಸ್ಮಿತೆ ಕೂಡ ಹೌದು. ಆದರೆ ಚಿತ್ರ ವಿಚಿತ್ರ ಅಂಧಭಕ್ತರ ಕೂಟವಾಗಿರುವ ಬಿಜೆಪಿ ಯವರು, ಕೋಟ್ಯಂತರ ಭಕ್ತರು ಶ್ರದ್ಧಾ ಭಕ್ತಿಯಿಂದ ಪೂಜಿಸುವ ಪುರಿ ಜನ್ನಾಥನೇ ಮೋದಿಯ ಭಕ್ತ ಎಂದು ಹೇಳುವ ಮಟ್ಟಕ್ಕೆ ತಲುಪಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುರಿ ಜಗನ್ನಾಥನೇ ಮೋದಿಯವರ ಭಕ್ತ ಎಂಬ ಸಂಬಿತ್ ಪಾತ್ರ ಹೇಳಿಕೆ ದೇಶಾದ್ಯಾಂತ ಕೋಟ್ಯಂತರ ದೈವ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಪಾತ್ರ ಹೇಳಿಕೆ ಜನರ ಆಕ್ರೋಶಕ್ಕೆ ಕಾರಣವಾಗಿದ್ದರೂ ಮೋದಿಯವರು ಈ ಬಗ್ಗೆ ಬಾಯಿಯೇ ಬಿಡುತ್ತಿಲ್ಲ. ಅವರ ಮೌನದ ಅರ್ಥ ತಾವು ದೇವರಿಗಿಂತ ದೊಡ್ಡವನು ಎಂಬ ಸಂಬಿತ್ ಪಾತ್ರ ಹೇಳಿಕೆಗೆ ಸಹಮತ ಇದೆ ಎಂದು ತಿಳಿದುಕೊಳ್ಳಬೇಕೆ.?

- ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News