ಡಿಕೆಶಿ ಪ್ರಕರಣ ಸಿಬಿಐ ತನಿಖೆಗೆ ನೀಡಿದ್ದೇ ಕಾನೂನುಬಾಹಿರ; ಬಿಜೆಪಿಗೆ ಪ್ರಿಯಾಂಕ್‌ ಖರ್ಗೆ ತಿರುಗೇಟು

Update: 2023-11-24 09:37 GMT

Photo: x//@INCKarnataka

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ಡಿ.ಕೆ. ಶಿವಕುಮಾರ್ ಅವರ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದ್ದೇ ಕಾನೂನುಬಾಹಿರವಾಗಿತ್ತು, ಇದೊಂದು ರಾಜಕೀಯ ಪ್ರೇರಿತ ಸಂಚು. ಇದು ಶಿವಕುಮಾರ್, ಸಿದ್ದರಾಮಯ್ಯ, ವಿರೋಧ ಪಕ್ಷಗಳನ್ನು ಕಟ್ಟಿಹಾಕುವ ಪ್ರಯತ್ನವಾಗಿತ್ತು ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು.

ಈ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕಳೆದ 9-10 ವರ್ಷಗಳಿಂದ ವಿರೋಧ ಪಕ್ಷಗಳನ್ನು ಮುಗಿಸುವ ಸಂಚು ನಡೆಸುತ್ತಿದೆ. ವಿರೋಧ ಪಕ್ಷಗಳ ಧ್ವನಿ ಅಡಗಿಸಲು, ವಿರೋಧ ಪಕ್ಷದ ನಾಯಕರಿಂದ ಎದುರಾಗುವ ತೊಂದರೆ ದಮನಿಸಲು ಆಪರೇಷನ್ ಕಮಲ ಹಾಗೂ ಐಟಿ, ಈಡಿ, ಸಿಬಿಐ ಮೂಲಕ ಬೆದರಿಕೆ ಹಾಕುವ ಪ್ರಯತ್ನ ಮಾಡಲಾಗುತ್ತಿದೆʼ ಎಂದು ದೂರಿದರು.

ಸಂಪುಟ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಮೇಲಿನ ಪ್ರಕರಣವನ್ನು ಸಿಬಿಐ ವಿಚಾರಣೆಯಿಂದ ಹಿಂಪಡೆಯುವ ರಾಜ್ಯ ಸರ್ಕಾರದ ತೀರ್ಮಾನದ ಬಗ್ಗೆ ನಿನ್ನೆ ರಾತ್ರಿಯಿಂದ ಮಾಧ್ಯಮ ಹಾಗೂ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಚರ್ಚೆಯಾಗುತ್ತಿದೆ. ಕಾನೂನು ವಿಚಾರವಾಗಿ ಸಾಕಷ್ಟು ಗೊಂದಲವಿದೆ. ಈ ಮಧ್ಯೆ ಬಿಜೆಪಿ ಹಲವು ತಪ್ಪು ಮಾಹಿತಿ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಹಂಚಿಕೊಂಡು ಬಿಜೆಪಿಗೆ ತಿರುಗೇಟು ನೀಡಿದರು.

9-9-2019ರಂದು ಈಡಿಯಿಂದ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ರವಾನೆಯಾಗಿ, ಅದರಲ್ಲಿ ಸೆಕ್ಷನ್ 62 ಅಡಿಯಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಮತ್ತಿತರರ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ (PMLA) ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ದಾಖಲಿಸಿರುವ ದೂರಿನ ಮೇಲೆ ಈಡಿ ನಡೆಸಿರುವ ತನಿಖೆಯ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ತಿಳಿಸಿತ್ತು. ಜನಪ್ರತಿನಿಧಿಗಳ ವಿರುದ್ಧ ಯಾವುದೇ ತನಿಖೆಯಾದಾಗ ಆಯಾ ರಾಜ್ಯ ಸರ್ಕಾರಕ್ಕೆ ಆ ಪ್ರಕರಣದ ಕುರಿತು ಮಾಹಿತಿ ರವಾನೆಯಾಗುತ್ತದೆ. ಈ ಮಾಹಿತಿಯನ್ನು 2-9-2019ರಂದು ಸಿಬಿಐಗೂ ರವಾನಿಸಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

“17-9-2019ರಂದು ಎಜಿ ಅವರು ಯಾವುದೇ ಅಭಿಪ್ರಾಯ ನೀಡದೇ, ಐದು ದಿನಗಳ ಕಾಲ ಕಾಯುತ್ತಾರೆ. 24-9-2019ರಂದು ಈಡಿ ಇಲಾಖೆಯ ಮೂಲ ಪತ್ರ ಅಡ್ವಕೇಟ್ ಜನರಲ್ ಅವರ ಬಳಿ ಇದೆ ಎಂದು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಹೊಸ ಫೈಲ್ ಓಪನ್ ಮಾಡಿ, ಅದೇ ದಿನ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ತೀರ್ಮಾನ ಮಾಡಲಾಗುತ್ತದೆ. ಅಲ್ಲಿಯವರೆಗೂ ಅಡ್ವಕೇಟ್ ಜನರಲ್ ಅವರ ಅಭಿಪ್ರಾಯ ಪಡೆದಿರುವುದಿಲ್ಲ. ನಂತರ 25-9-2019ರಂದು, ಮುಖ್ಯಮಂತ್ರಿಗಳು ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಲು ಮೌಖಿಕವಾಗಿ ಆದೇಶ ನೀಡುತ್ತಾರೆ. ಮುಖ್ಯಮಂತ್ರಿಗಳು ಈ ವಿಚಾರವನ್ನು ಅಡ್ವಕೇಟ್ ಜನರಲ್ ಅವರ ಬಳಿ ದೂರವಾಣಿ ಮೂಲಕ ಚರ್ಚೆ ಮಾಡಿರುವುದಾಗಿ ಆಗಿನ ಮುಖ್ಯಮಂತ್ರಿ ತಿಳಿಸಿರುತ್ತಾರೆ” ಎಂದು ಪ್ರಿಯಾಂಕ್‌ ಖರ್ಗೆ ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News