ಜನತಾ ದರ್ಶನ: ಸ್ಥಳದಲ್ಲೇ ಸಮಸ್ಯೆ ಬಗೆಹರಿಸಿದ ಸಿಎಂ ಸಿದ್ದರಾಮಯ್ಯ

Update: 2023-11-27 06:53 GMT

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಹಮ್ಮಿಕೊಂಡ ಜನಸ್ಪಂದನ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.

ಜನತಾ ದರ್ಶನದ ಹಿನ್ನೆಲೆಯಲ್ಲಿ ಜನಸಾಮಾನ್ಯರ ಅಹವಾಲುಗಳನ್ನು ಆಲಿಸಿದ ಸಿಎಂ ಸಿದ್ದರಾಮಯ್ಯ ಅವರು ಕೆಲವು ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆಗಳನ್ನು ನೀಡಿದರು.

ವೃದ್ದಾಪ್ಯ ವೇತನ ಮಂಜೂರಾತಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಇಲಾಖೆ ನಿರ್ದೇಶಕರನ್ನು ಕರೆಸಿ ತಾಂತ್ರಿಕ ತೊಂದರೆ ಇದ್ದರೆ ತಕ್ಷಣ ಬಗೆಹರಿಸಿ, ಸಿಬ್ಬಂದಿಯಿಂದ ತೊಂದರೆ ಆಗುತ್ತಿದ್ದರೆ ಅವರ ಮೇಲೆ ಕ್ರಮ ಜರುಗಿಸಿ ಎಂದು ಸಿಎಂ ಸೂಚಿಸಿದರು.

ಬೀದಿ ಬದಿ ವ್ಯಾಪಾರಿಗಳಿಗೆ, ತಳ್ಳು ಗಾಡಿಯಲ್ಲಿ ವ್ಯಾಪಾರ ಮಾಡುವವರಿಗೆ ಆಗುತ್ತಿರುವ ಪೊಲೀಸ್ ಮತ್ತು ಬಿಬಿಎಂಪಿ ಅಧಿಕಾರಿಗಳ ಕಿರುಕುಳದ ಬಗ್ಗೆ ಬಡ ವ್ಯಾಪಾರಿ ನಿಂಗಮ್ಮ ಅವರು ಮುಖ್ಯಮಂತ್ರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ಆದೇಶ ನೀಡಿದ್ದಾರೆ.

ತಕ್ಷಣ ಪೊಲೀಸ್ ಅಧಿಕಾರಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳನ್ನು ಕರೆಸಿದ ಸಿದ್ದರಾಮಯ್ಯ ಅವರು ನಿಂಗಮ್ಮ ಅವರಿಗೆ ಆಗುತ್ತಿರುವ ಕಿರುಕುಳ ತಪ್ಪಿಸುವಂತೆ ಸೂಚನೆ ನೀಡಿದ್ದಾರೆ.

ಮನೆ ಕಂದಾಯ ಕಟ್ಟಿದ್ದರೂ ದುಪ್ಪಟ್ಟು ದಂಡ ಹಾಕಿದ್ದಾರೆ. ಕಂದಾಯ ಕಟ್ಟಿದ ರಶೀದಿ ಇಟ್ಟುಕೊಂಡು BBMP ಗೆ ಹೋದರೆ ನಮಗೆ ಗೊತ್ತಿಲ್ಲ ಹೋಗಿ ಸರ್ಕಾರಕ್ಕೆ ಕೇಳಿ ಎಂದು ಸಿಬ್ಬಂದಿ ದರ್ಪದಿಂದ ನಡೆದುಕೊಳ್ಳುತ್ತಾರೆ ಎಂಬ ವೃದ್ದೆಯೊಬ್ಬರ ದೂರಿಗೆ ಕುಪಿತರಾದ ಮುಖ್ಯಮಂತ್ರಿಗಳು ಬಿಬಿಎಂಪಿ ಅಧಿಕಾರಿಯನ್ನು ಕರೆದು ಸದರಿ ಪ್ರಕರಣವನ್ನು ಖುದ್ದಾಗಿ ಗಮನಿಸಿ ಸಂಜೆಯೊಳಗೆ ಪರಿಹಾರ ಒದಗಿಸಿ ತನಗೆ ರಿಪೋರ್ಟ್ ಮಾಡುವಂತೆ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News