ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆಗೆ ಖಂಡನೆ: ಕಲಾಪ ಬಹಿಷ್ಕರಿಸಿದ ವಕೀಲರು
ಬೆಂಗಳೂರು: ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳನ್ನು ವಿವಿಧ ರಾಜ್ಯಗಳ ನ್ಯಾಯಾಲಯಗಳಿಗೆ ವರ್ಗಾವಣೆ ಮಾಡಿರುವ ಸುಪ್ರೀಂಕೋರ್ಟ್ ಕೊಲಿಜಿಯಂ ನಿರ್ಧಾರವನ್ನು ಖಂಡಿಸಿ ವಕೀಲರು ನ್ಯಾಯಾಲಯಗಳ ಕಲಾಪ ಬಹಿಷ್ಕರಿಸಿದ್ದಾರೆ.
ಇದರಿಂದ ಹೈಕೋರ್ಟ್ ಸೇರಿದಂತೆ ಬಹುತೇಕ ನ್ಯಾಯಾಲಯಗಳ ಕಲಾಪಗಳಲ್ಲಿ ಏರುಪೇರು ಕಂಡು ಬಂದಿದೆ. ಹೈಕೋರ್ಟ್‌ನ ಮೂರು ಪೀಠಗಳಲ್ಲಿ ಕಲಾಪದಿಂದ ಹೊರಗುಳಿದಿದ್ದರು. ಹಾಗಾಗಿ, ಕೋರ್ಟ್ ಹಾಲ್‌ಗಳು ಖಾಲಿ ಇದ್ದವು. ಅಲ್ಲದೆ, ಕೆಲವು ವಕೀಲರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಹಾಜರಾಗಿ ಸಮಯಾವಕಾಶ ಕೋರುತ್ತಿದ್ದರು.
ಬಹುತೇಕ ಕೋರ್ಟ್‌ಗಳಲ್ಲಿ ಪ್ರಕರಣಗಳ ವಿಚಾರಣೆಯನ್ನು ಮುಂದೂಡಲಾಯಿತು. ಒಟ್ಟಾರೆ ಕೋರ್ಟ್‌ಗಳಲ್ಲಿ ನಿಗದಿಯಂತೆ ಪೂರ್ಣ ಪ್ರಮಾಣದಲ್ಲಿ ಕಲಾಪ ನಡೆದಿಲ್ಲ.
ನಾಲ್ವರು ನ್ಯಾಯಮೂರ್ತಿಗಳನ್ನು ದೇಶದ ಬೇರೆ ಹೈಕೋರ್ಟ್‌ಗಳಿಗೆ ವರ್ಗಾವಣೆ ಮಾಡಲು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಮಾಡಿರುವ ಶಿಫಾರಸು ವಿರೋಧಿಸಿ ಬುಧವಾರ ಹೈಕೋರ್ಟ್‌ನ ಕಲಾಪವನ್ನು ಬಹಿಷ್ಕರಿಸಲು ಬೆಂಗಳೂರು ವಕೀಲರ ಸಂಘದ ವತಿಯಿಂದ ನಡೆದ ಸರ್ವ ಸದಸ್ಯರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು.