"ನನ್ನ ಗಂಡ ಫ್ರೆಂಚ್‌ ಫ್ರೈಸ್ ತಿನ್ನಲು ಬಿಡುತ್ತಿಲ್ಲ" : ಪತಿಯ ವಿರುದ್ಧ ಪತ್ನಿಯ ದೂರಿಗೆ ಹೈಕೋರ್ಟ್ ತಡೆ

Update: 2024-08-24 14:30 IST
"ನನ್ನ ಗಂಡ ಫ್ರೆಂಚ್‌ ಫ್ರೈಸ್ ತಿನ್ನಲು ಬಿಡುತ್ತಿಲ್ಲ" : ಪತಿಯ ವಿರುದ್ಧ ಪತ್ನಿಯ ದೂರಿಗೆ ಹೈಕೋರ್ಟ್  ತಡೆ

ಸಾಂದರ್ಭಿಕ ಚಿತ್ರ (Credit: indiatoday.in)

  • whatsapp icon

ಬೆಂಗಳೂರು: ‘ನನ್ನ ಗಂಡ ನನಗೆ ಫ್ರೆಂಚ್‌ ಫ್ರೈಸ್‌, ಅನ್ನ ಮತ್ತು ಮಾಂಸ ತಿನ್ನಲು ಬಿಡುತ್ತಿಲ್ಲ’ ಎಂದು ಪತಿಯ ವಿರುದ್ಧ ಆರೋಪಿಸಿ, ಎಫ್ ಐ ಆರ್ ದಾಖಲಿಸಿದ್ದ ಪತ್ನಿಯ ದೂರಿಗೆ ಹೈಕೋರ್ಟ್ ತಡೆ ನೀಡಿದೆ.

ಮಹಿಳೆಯೊಬ್ಬರು ಗಂಡ, ಅತ್ತೆ ಮತ್ತು ಮಾವನ ವಿರುದ್ಧ ವರದಕ್ಷಿಣೆ ನಿಷೇಧ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿದ್ದರು. ಈ ಸಂಬಂಧ ಕ್ರಿಮಿನಲ್‌ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಎಫ್‌ಐಆರ್‌ಗೆ ತಡೆ ನೀಡಿ ಆದೇಶಿಸಿದೆ.

‘ಮದುವೆಯಾದ ನಂತರ ಪತ್ನಿಯನ್ನು ಕುಟುಂಬ ವೀಸಾದಡಿ ಅಮೆರಿಕಕ್ಕೆ ಕರೆದುಕೊಂಡು ಹೋಗಿದ್ದೆ. ನನ್ನ ಪತ್ನಿ ಹಠಮಾರಿ ಸ್ವಭಾವ. ನನಗೆ ಸರಿಯಾಗಿ ಅಡುಗೆ ಮಾಡಿ ಊಟ ಹಾಕುವುದಿಲ್ಲ. ಪ್ರಶ್ನಿಸಿದರೆ, ನೀವು ನನ್ನನ್ನು ಅಡುಗೆ ಮಾಡಿ ಹಾಕುವುದಕ್ಕೆ ಮದುವೆಯಾಗಿದ್ದೀರಾ ಎಂದು ಮರು ಪ್ರಶ್ನಿಸುತ್ತಾಳೆ’ ಎಂದು ಪತಿ ಅರ್ಜಿಯಲ್ಲಿ ದೂರಿದ್ದಾರೆ.

‘ಸದಾ ಮೊಬೈಲ್‌ ಹಿಡಿದುಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಸೀರಿಯಲ್‌ಗಳು, ಫೇಸ್‌ ಬುಕ್‌, ಇನ್‌ಸ್ಟಾಗ್ರಾಂ ರೀಲ್ಸ್ ವೀಕ್ಷಣೆಯಲ್ಲೇ ಮುಳುಗಿರುತ್ತಾಳೆ. ರೀಲ್ಸ್‌ ಮಾಡುವ ಹುಚ್ಚು ಬೇರೆ ಇದೆ. ಅಂಗಡಿಗೆ ಹೋದರೆ ಬೇಕಾಬಿಟ್ಟಿ ಹಣ್ಣು, ಸಾಮಾನುಗಳನ್ನು ತಂದು ಬಳಸದೇ ಕಸದ ಬುಟ್ಟಿಗೆ ಎಸೆಯುತ್ತಾಳೆ. ಆಕೆಗೆ ಮಾನಸಿಕ ಸ್ಥಿಮಿತ ಇಲ್ಲ. ಆದ್ದರಿಂದ, ಆಕೆ ನನ್ನ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗೆ ತಡೆ ನೀಡಬೇಕು’ ಎಂದು ಪತಿ ಅರ್ಜಿಯಲ್ಲಿ ಕೋರಿದ್ದರು.

ಅರ್ಜಿಯಲ್ಲಿ ಪತಿ, ಪತ್ನಿಯ ಸಣ್ಣ ಸಣ್ಣ ಸಂಗತಿಗಳನ್ನೂ ಪಟ್ಟಿ ಮಾಡಿ ಆಕ್ಷೇಪಿಸಿರುವುದನ್ನು ಆಲಿಸಿದ ನ್ಯಾಯಮೂರ್ತಿಗಳು, ‘ಇದೊಂದು ಕ್ಷುಲ್ಲಕ ವಿಚಾರ‘ ಎಂದು ಮೌಖಿಕವಾಗಿ ಹೇಳಿ ತಡೆ ಆದೇಶ ನೀಡಿದರು.

‘ಪ್ರಕರಣದಿಂದ ವಿದೇಶಕ್ಕೆ ತೆರಳಲು ತೊಂದರೆ ಆಗುತ್ತಿದೆ’ ಎಂಬ ಪತಿಯ ಆಕ್ಷೇಪಣೆಯನ್ನು ನಿವಾರಿಸುವಂತೆ ಸೂಚಿಸಿದ, ಏಕ ಸದಸ್ಯ ಪೀಠ ವಿಚಾರಣೆ ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News