ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಘನತೆಯಿಂದ ಸಾಯುವ ಹಕ್ಕನ್ನು ಜಾರಿಗೊಳಿಸಿದ ರಾಜ್ಯ ಸರಕಾರ

Update: 2025-01-31 20:58 IST
ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಘನತೆಯಿಂದ ಸಾಯುವ ಹಕ್ಕನ್ನು ಜಾರಿಗೊಳಿಸಿದ ರಾಜ್ಯ ಸರಕಾರ

ಸಾಂದರ್ಭಿಕ ಚಿತ್ರ (Meta AI)

  • whatsapp icon

ಬೆಂಗಳೂರು : ಗಂಭೀರ ಹಾಗೂ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ, ಯಾವುದೇ ರೀತಿಯ ಚಿಕಿತ್ಸೆ ನೀಡಿದರೂ ಗುಣಮುಖರಾಗಲು ಸಾಧ್ಯವೇ ಇಲ್ಲವೆಂದು ದೃಢಪಡುವ ರೋಗಿಗಳಿಗೆ ಸುಪ್ರೀಂಕೋರ್ಟ್ ಆದೇಶದಂತೆ ಘನತೆಯಿಂದ ಸಾಯುವ ಹಕ್ಕನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ.

ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆದೇಶ ಹೊರಡಿಸಿದ್ದು, ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದು, ಚೇತರಿಕೆಯೆ ಕಾಣದೆ ಜೀವನಪೂರ್ತಿ ಸಂಕಷ್ಟ ಅನುಭವಿಸುವ ಸ್ಥಿತಿಯಲ್ಲಿ ಇರುವವರಿಗೆ ಮಾತ್ರ ಈ ಅವಕಾಶವನ್ನು ಕಲ್ಪಿಸಿದೆ.

ಘನತೆಯಿಂದ ಸಾಯಲು ಅವಕಾಶ ನೀಡುವುದನ್ನು ನಿರ್ಧರಿಸಲು ಮೂವರು ವೈದ್ಯರನ್ನು ಒಳಗೊಂಡ ಎರಡು ಬೋರ್ಡ್‍ಗಳ ಸ್ಥಾಪನೆ ಮಾಡಲಾಗುವುದು. ಗಂಭೀರವಾದ ಮತ್ತು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರ ಕುಟುಂಬಸ್ಥರ ಮನವಿ ಮೇರೆಗೆ ವೈದ್ಯರ ತಂಡ ಕಾರ್ಯ ನಿರ್ವಹಿಸಲಿದೆ.

ಇದಕ್ಕಾಗಿ ಎರಡು ಪ್ರೈಮರಿ ಹಾಗೂ ಸೆಕೆಂಡರಿ ಎಂಬ ಎರಡು ವೈದ್ಯರ ಬೋರ್ಡ್ ಗಳನ್ನು ಸ್ಥಾಪಿಸಲಾಗುತ್ತದೆ. ಪ್ರೈಮರಿ ಬೋರ್ಡ್‍ನಲ್ಲಿ ಮೂವರು ವೈದರು ಇರುತ್ತಾರೆ. ಸೆಕೆಂಡರಿ ಬೋರ್ಡ್‍ನಲ್ಲಿ ಸಹ ಮೂವರು ವೈದ್ಯರು ಇರಲಿದ್ದಾರೆ. ಈ ಪೈಕಿ ಒಬ್ಬರು ಸರಕಾರಿ ವೈದ್ಯರು ಇರುತ್ತಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರೋಗಿಯ ಕುಟುಂಬಸ್ಥರು ಮಾಡಿದ ಮನವಿಯನ್ನು ಮೊದಲು ಪ್ರೈಮರಿ ಬೋರ್ಡ್ ಪರಿಶೀಲನೆ ನಡೆಸಿ ವರದಿ ನೀಡುತ್ತದೆ. ಆನಂತರ ಆ ವರದಿಯನ್ನು ಸೆಕೆಂಡರಿ ಬೋರ್ಡ್ ಪರಿಶೀಲನೆ ನಡೆಸುತ್ತದೆ. ತದ ನಂತರ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಆ ವರದಿಯ ಪ್ರತಿ ನೀಡಲಾಗುತ್ತದೆ. ಜೆಎಂಎಫ್‍ಸಿ ನ್ಯಾಯಾಲಯವು ವರದಿ ಪ್ರತಿಯನ್ನು ದಾಖಲೆಗಾಗಿ ಹೈಕೋರ್ಟ್‍ನ ರಿಜಿಸ್ಟ್ರಾರ್‌ ಗಳಿಗೆ ಕಳುಹಿಸಿಕೊಡಲಿದೆ. ದಾಖಲೆಗಳನ್ನು ಪರಿಶೀಲಿಸಿ ನ್ಯಾಯಾಲಯ ಅನುಮತಿ ನೀಡಿದ ಬಳಿಕ ರೋಗಿಗೆ ಅಳವಡಿಸಲಾಗಿರುವ ಜೀವ ರಕ್ಷಕ ಸಾಧನಗಳನ್ನು ವೈದ್ಯರು ತೆರವುಗೊಳಿಸಬಹುದು.

ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ರೋಗಿಯು ಘನತೆಯಿಂದ ಸಾಯುವ ಹಕ್ಕಿಗಾಗಿ ಸುಪ್ರೀಂಕೋರ್ಟ್‍ನ ನಿರ್ದೇಶನವನ್ನು ಜಾರಿಗೆ ತರಲು ನಾವು ಐತಿಹಾಸಿಕ ಆದೇಶವನ್ನು ಹೊರಡಿಸಿದ್ದೇವೆ ಎಂದು ತಿಳಿಸಿದ್ದಾರೆ.

ಚೇತರಿಕೆಯ ಭರವಸೆ ಇಲ್ಲದ ಮಾರಕ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಮುಂದೆ ಜೀವ ಉಳಿಸುವ ಚಿಕಿತ್ಸೆಯಿಂದ ಪ್ರಯೋಜನ ಆಗಲ್ಲ ಎಂಬುದನ್ನು ದೃಢೀಕರಿಸಿದ ನಂತರ ಘನತೆಯಿಂದ ಸಾಯುವ ಅವಕಾಶವನ್ನು ಈ ಕಾನೂನು ನೀಡುತ್ತದೆ. ಇದರಿಂದ ಅನೇಕ ಕುಟುಂಬಗಳು ಮತ್ತು ವ್ಯಕ್ತಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕ ರಾಜ್ಯ ಪ್ರಗತಿಪರ ರಾಜ್ಯವಾಗಿದ್ದು, ಹೆಚ್ಚು ಮತ್ತು ನ್ಯಾಯಯುತ ಸಮಾಜಕ್ಕಾಗಿ ಉದಾರ ಮತ್ತು ಸಮಾನ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ನಾವು ಯಾವಾಗಲೂ ಮುಂಚೂಣಿಯಲ್ಲಿದ್ದೇವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News