ಕೆಇಎ | ಪಿಎಸ್‍ಐ ಸೇರಿ ವಿವಿಧ ಹುದ್ದೆಗಳ ನೇಮಕಾತಿಗೆ ಪರೀಕ್ಷಾ ದಿನಾಂಕ ಪ್ರಕಟ
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಸಬ್‍ಇನ್‍ಸ್ಪೆಕ್ಟರ್ (ಪಿಎಸ್‍ಐ) ಹುದ್ದೆಗಳಿಗೆ ಸೇರಿದಂತೆ ವಿವಿಧ ಇಲಾಖೆ, ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮುಂಬರುವ ದಿನಗಳಲ್ಲಿ ನಡೆಸಲು ಉದ್ದೇಶಿಸಿರುವ ನೇಮಕಾತಿ ಪರೀಕ್ಷೆಗಳ ಸಂಭಾವ್ಯ ದಿನಾಂಕಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಶುಕ್ರವಾರದಂದು ಪ್ರಕಟಿಸಿದೆ.
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಪ್ರಕಟನೆ ಹೊರಡಿಸಿದ್ದು, ಪೊಲೀಸ್ ಇಲಾಖೆಯ 402 ಪಿಎಸ್‍ಐ ಹುದ್ದೆಗಳಿಗೆ ಸೆ.22ರಂದು ಪರೀಕ್ಷೆ ನಡೆಯಲಿದೆ. ಉಳಿದಂತೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ(ಸಹಾಯಕ ಲೆಕ್ಕಿಗ, ಸಹಾಯಕ ಸಂಚಾರ ನಿರೀಕ್ಷಕ, ಕ.ರಾ.ಸಾ.ಪೇದೆ, ಕುಶಲಕರ್ಮಿ, ತಾಂತ್ರಿಕ ಸಹಾಯಕ) 36 ಹುದ್ದೆಗಳಿಗೆ ಜು.12 ರಿಂದ 14ರ ವರೆಗೆ ಪರೀಕ್ಷೆಗಳು ನಡೆಯಲಿವೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (ಸಹಾಯಕ ಎಂಜಿನಿಯರ್-ಸಿವಿಲ್, ಪ್ರಥಮ ದರ್ಜೆ ಲೆಕ್ಕ ಸಹಾಯಕರು-ಗ್ರೂಪ್-ಸಿ) 64 ಹುದ್ದೆಗಳಿಗೆ ಆ.11ರಂದು ಪರೀಕ್ಷೆ ನಿಗದಿಗೊಳಿಸಲಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ನಿರ್ವಾಹಕ- ದರ್ಜೆ-3 ಮೇಲ್ವಿಚಾರಕೇತರ) 2500 ಹುದ್ದೆಗಳಿಗೆ ಸೆ.1ರಂದು ಪರೀಕ್ಷಾ ವೇಳಾಪಟ್ಟಿ ನಿಗದಿಯಾಗಿದೆ.
ಕಂದಾಯ ಇಲಾಖೆಯ (ಗ್ರಾಮ ಆಡಳಿತ ಅಧಿಕಾರಿ) ಒಂದು ಸಾವಿರ ಹುದ್ದೆಗಳಿಗೆ ಅ.27ರಂದು ಪರೀಕ್ಷೆ ನಡೆಯಲಿದೆ. ಕನ್ನಡ ಪರೀಕ್ಷೆ ಅನ್ವಯವಾಗುವ ಹುದ್ದೆಗಳಿಗೆ ಪರೀಕ್ಷೆ ನಡೆಯುವ ದಿನಾಂಕವನ್ನು ಮುಂಬರುವ ದಿನಗಳಲ್ಲಿ ತಿಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪರೀಕ್ಷೆಗಳನ್ನು ಹೆಚ್ಚು ವ್ಯವಸ್ಥಿತ ರೀತಿಯಲ್ಲಿ ನಡೆಸುವುದಕ್ಕೆ ಪೂರಕವಾಗಿ ಈ ದಿನಾಂಕಗಳನ್ನು ಸಾಕಷ್ಟು ಮುಂಚಿತವಾಗಿ ಪ್ರಕಟಿಸಲಾಗಿದೆ ಎಂದು ಎಚ್. ಪ್ರಸನ್ನ ಅವರು ಸ್ಪಷ್ಟಪಡಿಸಿದ್ದಾರೆ.