ಕೆಪಿಎಸ್ಸಿ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಒಪ್ಪಿಗೆ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ದಲ್ಲಿನ ಭ್ರಷ್ಟಾಚಾರ ತಡೆಗಟ್ಟಿ, ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳಲ್ಲಿ ಭರವಸೆ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಪಕ್ಷಭೇದ ಮರೆತು ಆಗ್ರಹಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಮಂಗಳವಾರ ವಿಧಾನಸಭೆಯಲ್ಲಿ ಕೆಪಿಎಸ್ಸಿ ಕಾರ್ಯನಿರ್ವಹಣೆಗಳಿಗೆ ನಿಯಮಾವಳಿಗಳನ್ನು ರೂಪಿಸುವ ಸಂಪೂರ್ಣ ಸ್ವಾತಂತ್ರವನ್ನು ಉಳಿಸಿಕೊಳ್ಳುವ ‘ಕರ್ನಾಟಕ ಲೋಕಸೇವಾ ಆಯೋಗ(ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) ತಿದ್ದುಪಡಿ ವಿಧೇಯಕ-2025’ಕ್ಕೆ ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರ ದೊರೆಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯರ ಪರವಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ್, ಕರ್ನಾಟಕ ಲೋಕ ಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) ತಿದ್ದುಪಡಿ ವಿಧೇಯಕ ಮಂಡಿಸಿದರು.
ಬಳಿಕ ಮಾತನಾಡಿದ ಅವರು, ‘ಕೆಪಿಎಸ್ಸಿಯಲ್ಲಿ ಪರೀಕ್ಷಾ ನಿಯಂತ್ರಕ ಅನುಪಸ್ಥಿತಿಯಲ್ಲಿ ಕರ್ತವ್ಯಗಳನ್ನು ನಿರ್ವಹಿಸಲು ಇತರೆ ಅಧಿಕೃತಗೊಳಿಸಿದ ವ್ಯಕ್ತಿಗಳನ್ನು ನಿಯೋಜಿಸುವ ಅಧಿಕಾರವನ್ನು ‘ಕೆಪಿಎಸ್ಸಿಯ ಸದಸ್ಯರು ಹಾಗೂ ಅಧ್ಯಕ್ಷರಿಗೆ ನೀಡಲಾಗಿದೆ. ಈ ರೀತಿ ನಿರ್ಣಯ ತೆಗೆದುಕೊಳ್ಳುವ ವೇಳೆ ಕೋರಂನ ಸಂಖ್ಯೆ ಶೇ.50ರಷ್ಟಿರಬೇಕು ಎಂಬುದನ್ನು ಪ್ರಸ್ತಾಪಿಸಲಾಗಿದೆ.
ಯಾವುದೇ ಸದಸ್ಯ ತನ್ನ ಭಿನ್ನಾಭಿಪ್ರಾಯಗಳನ್ನು ದಾಖಲಿಸಲು ಮುಕ್ತ ಅವಕಾಶಗಳಿರುತ್ತವೆಂಬ ನಿಯಮದ ಜೊತೆಗೆ ಯಾವುದೇ ನಿಯಮಾವಳಿಗಳನ್ನು ರಚಿಸಬೇಕಾದರೆ ಆಯೋಗದೊಂದಿಗೆ ಸಮಾಲೋಚಿಸಿ ಎಂಬ ಪದವನ್ನು ಈವರೆಗೂ ಅಳವಡಿಸಲಾಗಿತ್ತು. ಅದನ್ನು ತೆಗೆದು ಹಾಕಲಾಗಿದೆ’ ಎಂದು ಉಲ್ಲೇಖಿಸಿದರು.
‘ಕೆಪಿಎಸ್ಸಿ ಪರೀಕ್ಷೆ ನಡೆಸುವಲ್ಲೂ ನಿಯಂತ್ರಕರು ಹಾಗೂ ಜಂಟಿ ನಿಯಂತ್ರಕರ ಅನುಪಸ್ಥಿತಿಯಲ್ಲಿ ಯಾರು ಎಂಬ ಗೊಂದಲವಿತ್ತು. ಅದಕ್ಕೆ ವಿಧೇಯಕದಲ್ಲಿ ಸ್ಪಷ್ಟನೆ ನೀಡಲಾಗಿದೆ. ಕೆಪಿಎಸ್ಸಿ ಕಾರ್ಯನಿರ್ವಹಣೆ ಬಗ್ಗೆ ಸದನದ ಯಾರಿಗೂ ಸಮಾಧಾನವಿಲ್ಲ. ಹೀಗಾಗಿ ಈ ತಿದ್ದುಪಡಿ ಅನಿವಾರ್ಯ ಹಾಗೂ ಅವಶ್ಯಕ ಎಂಬ ಅಭಿಪ್ರಾಯ ಸರಕಾರದ್ದಾಗಿದೆ. ಸದ್ಯಕ್ಕೆ ಸಣ್ಣ ಪ್ರಮಾಣದ ತಿದ್ದುಪಡಿ ಮಾಡಲಾಗಿದ್ದು, ಹೆಚ್ಚಿನ ತಿದ್ದುಪಡಿ ಸಾಧ್ಯವೇ ಎಂಬ ಪರಿಶೀಲನೆ ನಡೆಯುತ್ತಿದೆ. ಲೋಕಸೇವಾ ಆಯೋಗಕ್ಕೆ ಚಿಕಿತ್ಸೆ ನೀಡಬೇಕು ಎಂಬುದು ನಮ್ಮ ಅಭಿಪ್ರಾಯ’ ಎಂದರು.
ಬಿಜೆಪಿ ಸದಸ್ಯ ಎಸ್.ಸುರೇಶ್ ಕುಮಾರ್ ಮಾತನಾಡಿ, ಕೆಪಿಎಸ್ಸಿಯಲ್ಲಿ ಹೊಟ್ಟೆ ತುಂಬಿದ ಜನ ಇದ್ದಾರೆ. ಹಸಿದವರ ಅಳಲು ಅವರಿಗೆ ಗೊತ್ತಾಗುವುದಿಲ್ಲ. ಸರಳೀಕೃತ, ಪಾರದರ್ಶಕ, ಉತ್ತರದಾಯಿತ್ವದ ಯಾವುದೇ ಗುಣಲಕ್ಷಣಗಳು ಕೆಪಿಎಸ್ಸಿಯಲ್ಲಿಲ್ಲ. ಅಲ್ಲಿಗೆ ಸದಸ್ಯರನ್ನು ಆಯ್ಕೆ ಮಾಡುವಾಗಲೇ ಸಮಸ್ಯೆ ಆರಂಭವಾಗಿದೆ. ನಮ್ಮವನು ಎಂಬ ಕಾರಣಕ್ಕಾಗಿ ಎಲ್ಲ ಸರಕಾರಗಳು ನೇಮಕಾತಿ ಮಾಡುತ್ತವೆ. ಕೆಪಿಎಸ್‍ಸಿಯನ್ನು ಶುದ್ಧೀಕರಣ ಮಾಡದೇ ಇದ್ದರೆ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.
‘ಹನ್ನೊಂದು ವರ್ಷದಲ್ಲಿ ಈವರೆಗೂ ಮೂರು ಬಾರಿ ಮಾತ್ರ ಕೆಎಎಸ್ ಪರೀಕ್ಷೆ ನಡೆದಿದೆ. ಸಾಕಷ್ಟು ಮಂದಿ ಆಕಾಂಕ್ಷಿಗಳ ವಯೋಮಿತಿ ಮೀರಿ ಹೋಗಿದೆ. 30 ವರ್ಷ ಸರಕಾರಿ ಸೇವೆ ಸಲ್ಲಿಸುವ ಅಧಿಕಾರಿ ನೇಮಕಾತಿ ಹಂತದಲ್ಲೇ ಹತಾಶೆ, ಭ್ರಷ್ಟಾಚಾರ ಕಂಡುಬಂದರೆ ಅದು ಸರಿಹೋಗುವುದಿಲ್ಲ ಎಂದು ಸುರೇಶ್ ಕುಮಾರ್ ಹೇಳಿದರು.
ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ, ಕೆಪಿಎಸ್ಸಿ ಸರಿ ಮಾಡಬೇಕು, ಇಲ್ಲವೇ ರದ್ದು ಮಾಡಬೇಕು. ಅಲ್ಲಿ ಹಗರಣಗಳ ಸರಮಾಲೆಯೇ ನಡೆದಿವೆ. ಸಂದರ್ಶನದ ಸಂದರ್ಭದಲ್ಲಿ ಕೆಪಿಎಸ್ಸಿ ಅಧ್ಯಕ್ಷರು ಹೊರಬಂದು ಅಭ್ಯರ್ಥಿಗೆ ನಿಮ್ಮ ಕೆಲಸ ಆಗಿದೆ ಎಂದು ಹೇಳುವಷ್ಟರ ಮಟ್ಟಿಗೆ ಅವ್ಯವಹಾರಗಳು ನಡೆಯುತ್ತಿವೆ. ಸಣ್ಣ ಪ್ರಮಾಣದ ಚಿಕಿತ್ಸೆ ಸಾಲುವುದಿಲ್ಲ. ಮೇಜರ್ ಸರ್ಜರಿಯೇ ಆಗಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ವಿಪಕ್ಷ ನಾಯಕ ಆರ್.ಅಶೋಕ್, ‘ಶಸ್ತ್ರಚಿಕಿತ್ಸೆಯ ಮೇಜಿನ ಮೇಲಿರುವ ವ್ಯಕ್ತಿಗೆ ಔಷಧಿ, ಚುಚ್ಚುಮದ್ದು ಸಾಲುವುದಿಲ್ಲ. ದೊಡ್ಡ ಶಸ್ತ್ರಚಿಕಿತ್ಸೆಯೇ ಆಗಬೇಕು. ಯುಪಿಎಸ್‍ಸಿ ಮಾದರಿಯಲ್ಲಿ ಬದಲಾವಣೆ ತನ್ನಿ. ಎಲ್ಲ ನೇಮಕಾತಿಗಳು ಕೋರ್ಟ್ ಮೆಟ್ಟಿಲೇರಿವೆ. ವಕೀಲರಿಗೆ ಕೋಟ್ಯಂತರ ರೂಪಾಯಿ ಹಣ ಕೊಡುವ ಸಾಮರ್ಥ್ಯ ಎಲ್ಲಿಂದ ಬರುತ್ತದೋ ಗೊತ್ತಿಲ್ಲ’ ಎಂದು ಸಲಹೆ ಮಾಡಿದರು.
ಆಡಳಿತ ಪಕ್ಷದ ತನ್ವೀರ್ ಸೇಠ್ ಮಾತನಾಡಿ, ‘ಶಿಕ್ಷಕರ ನೇಮಕಾತಿಗಾಗಿ ರಚನೆಯಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದಲ್ಲಿ ಎಂಜಿನಿಯರ್ ಗಳ ನೇಮಕಾತಿಯಾಗುತ್ತಿದೆ. ಅಲ್ಲಿ ನಡೆಯುತ್ತಿರುವುದು ನಮ್ಮ ಕಣ್ಣಿಗೆ ಕಾಣುತ್ತಿಲ್ಲ. ದೇಶದ ಎಲ್ಲಿಯೇ ಆದರೂ ಉತ್ತಮ ಅಭ್ಯಾಸಗಳಿದ್ದರೆ ಅದನ್ನು ಕರ್ನಾಟಕ ನೇಮಕಾತಿ ಆಯೋಗಗಳು ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಬಳಿಕ ಎಚ್.ಕೆ.ಪಾಟೀಲ್ ವಿಧೇಯಕದ ಪರ್ಯಾಯಲೋಚನೆಗೆ ಮನವಿ ಮಾಡಿ, ಕೆಪಿಎಸ್ಸಿಗೆ ಒಮ್ಮೆ ಸದಸ್ಯರನ್ನು ನೇಮಕಾತಿ ಮಾಡಿದರೆ ಅವರನ್ನು ವಜಾ ಮಾಡಬೇಕಾದರೆ ರಾಷ್ಟ್ರಪತಿ ಆದೇಶವಾಗಬೇಕು. ಸಂವಿಧಾನದ 314 ರಿಂದ 318ರ ವರೆಗೆ ನಿಯಮಾವಳಿಗಳು ಕೆಪಿಎಸ್ಸಿ ಸದಸ್ಯರು ಮತ್ತು ಅಧ್ಯಕ್ಷರ ನೇಮಕಾತಿ ಹಾಗೂ ಅನರ್ಹತೆ ಬಗ್ಗೆ ಸ್ಪಷ್ಟ ಉಲ್ಲೇಖಗಳಿವೆ. ಅದರಲ್ಲಿರುವ ನಿಯಮಾವಳಿ ಪಾಲನೆ ಕಷ್ಟಸಾಧ್ಯ ಎಂದರು.
‘ಸಚಿವರು, ಶಾಸಕರು ತಪ್ಪು ಮಾಡಿದರೆ ರಾಜೀನಾಮೆ ಕೇಳಲಾಗುತ್ತದೆ. ಆದರೆ ದುರ್ನಡತೆ ತೋರಿದ ಕೆಪಿಎಸ್ಸಿ ಸದಸ್ಯರು ಮತ್ತು ಅಧ್ಯಕ್ಷರ ವಿಚಾರದಲ್ಲಿ ಕಾನೂನಿನ ರಕ್ಷಣೆಯಿದೆ. ಈ ಸದನದಲ್ಲಿರುವ ಯಾರೊಬ್ಬರೂ ಕೆಪಿಎಸ್ಸಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳುತ್ತಿಲ್ಲ. ಸಾರ್ವಜನಿಕರ ವಲಯದಲ್ಲಿ, ಮಾಧ್ಯಮಗಳಲ್ಲಿ ಕೊನೆಗೆ ಹೈಕೋರ್ಟ್‍ನಲ್ಲೂ ಕೆಪಿಎಸ್ಸಿ ಕರ್ಮಕಾಂಡಗಳ ಬಗ್ಗೆ ಆಕ್ಷೇಪಗಳಿವೆ ಎಂದು ಉಲ್ಲೇಖಿಸಿದರು.
‘ಶಾಸಕಾಂಗದ ಪ್ರತಿನಿಧಿಗಳಿಗೆ ಮಾತ್ರ ಆತ್ಮಸಾಕ್ಷಿ ಇದ್ದರೆ ಸಾಲದು. ಕೆಪಿಎಸ್ಸಿ ಸದಸ್ಯರು ಹಾಗೂ ಅಧ್ಯಕ್ಷರಿಗೂ ಆತ್ಮಸಾಕ್ಷಿ ಇರಬೇಕು. ಹೀಗಾಗಿ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಬೇಕು. ಜನರ ಭರವಸೆಯಂತೆ ಲೋಕಸೇವಾ ಆಯೋಗದ ಸುಧಾರಣೆಗೆ ಈ ಮೂಲಕ ಸಹಕಾರ ನೀಡಬೇಕು’ ಎಂದು ಎಚ್.ಕೆ.ಪಾಟೀಲ್ ಆಗ್ರಹಿಸಿದರು. ಆ ಬಳಿಕ ಪಕ್ಷಾತೀತವಾಗಿ ಚರ್ಚೆ ನಡೆದು ಸರ್ವಾನುಮತದ ಮೂಲಕ ವಿಧೇಯಕವನ್ನು ಅಂಗೀಕರಿಸಲಾಯಿತು. ಸ್ಪೀಕರ್ ಯು.ಟಿ.ಖಾದರ್ ವಿಧೇಯಕದ ಅಂಗೀಕಾರವನ್ನು ಘೋಷಿಸಿದರು.
‘ನಿರುದ್ಯೋಗಿ ಪದವೀಧರರು, ಉದ್ಯೋಗಾಕಾಂಕ್ಷಿಗಳು ಸೇರಿದಂತೆ ಕೆಪಿಎಸ್ಸಿ ಬಗ್ಗೆ ಸಾರ್ವಜನಿಕವಾಗಿ ಛೀಮಾರಿ ಹಾಕುತ್ತಿದ್ದಾರೆ. ಕೆಪಿಎಸ್ಸಿ ಬದಲಾವಣೆ ಆಗುವ ವಿಶ್ವಾಸ ಯಾರಿಗೂ ಇಲ್ಲ. ಹೀಗಾಗಿ ರಾಜ್ಯ ಸರಕಾರ ಆ ಸಂಸ್ಥೆಯನ್ನು ಅಮೂಲಾಘ್ರವಾಗಿ ಶುದ್ಧೀಕರಣ ಮಾಡಲು ಕ್ರಮ ಕೈಗೊಳ್ಳುವ ಮೂಲಕ ಜನರಲ್ಲಿ ಭರವಸೆ ಮೂಡಿಸಬೇಕು’
-ಕೆ.ಎಂ.ಶಿವಲಿಂಗೇಗೌಡ ಆಡಳಿತ ಪಕ್ಷದ ಸದಸ್ಯ