ಕೆಪಿಎಸ್ಸಿ ಪರೀಕ್ಷೆಗಳಲ್ಲಿ ಪಾರದರ್ಶಕತೆ ತನ್ನಿ : ವಿಜಯೇಂದ್ರ ಆಗ್ರಹ

Update: 2025-02-02 20:13 IST
ಕೆಪಿಎಸ್ಸಿ ಪರೀಕ್ಷೆಗಳಲ್ಲಿ ಪಾರದರ್ಶಕತೆ ತನ್ನಿ : ವಿಜಯೇಂದ್ರ ಆಗ್ರಹ

ವಿಜಯೇಂದ್ರ

  • whatsapp icon

ಬೆಂಗಳೂರು : ರಾಜ್ಯ ಸರಕಾರ ಇನ್ನಾದರೂ ಕಠಿಣ ಪರಿಶ್ರಮದಿಂದ ಉದ್ಯೋಗವನ್ನು ಅರಸಿ ಪರೀಕ್ಷೆಗಳನ್ನು ಬರೆಯುವ ಸಾವಿರಾರು ಉದ್ಯೋಗಾಕಾಂಕ್ಷಿಗಳ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಅಲ್ಲದೆ, ಕೆಪಿಎಸ್ಸಿ ಎಡವಟ್ಟುಗಳಿಗೆ ಸಂಪೂರ್ಣ ಕಡಿವಾಣ ಹಾಕಿ ನೇಮಕಾತಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹಿಸಿದ್ದಾರೆ.

ರವಿವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ಕೆಪಿಎಸ್ಸಿ ನಡೆಸುತ್ತಿರುವ ಪ್ರತಿ ಪರೀಕ್ಷೆಗಳಲ್ಲಿಯೂ ಗೊಂದಲಗಳು, ಲೋಪಗಳು, ಭಾಷಾಂತರ ದೋಷಗಳು ಬಯಲಾಗುತ್ತಲೇ ಇವೆ. ಈ ಹಿಂದಿನ ಪರೀಕ್ಷೆಯಲ್ಲೂ ಕನ್ನಡ ಭಾಷಾ ಪರೀಕ್ಷಾರ್ಥಿಗಳ ಪ್ರಶ್ನೆಪತ್ರಿಕೆ ಸಮರ್ಪಕವಾಗಿ ಭಾಷಾಂತರಿಸದೇ ಯಡವಟ್ಟು ಮಾಡಿ ಲಕ್ಷಾಂತರ ಪರೀಕ್ಷಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು ಎಂದು ತಿಳಿಸಿದ್ದಾರೆ.

ಕರ್ನಾಟಕದ ಮಾತೃಭಾಷೆಯಲ್ಲಿಯೇ ಸೂಕ್ತ ಪ್ರಶ್ನೆಗಳನ್ನು ನೀಡುವಲ್ಲಿ ಸಂಪೂರ್ಣ ವಿಫಲವಾಗಿ ಪದೇ ಪದೇ ಕೆಎಎಸ್ ಪರೀಕ್ಷಾರ್ಥಿಗಳನ್ನು ಗೊಂದಲಕ್ಕೆ ದೂಡುತ್ತಿರುವ ಬೇಜವಾಬ್ದಾರಿತನ ಪದೇ ಪದೇ ಮರುಕಳಿಸುತ್ತಿರುವುದು ಕೆಪಿಎಸ್ಸಿ ವೈಫಲ್ಯ ಹಾಗೂ ರಾಜ್ಯ ಸರ್ಕಾರದ ಅಸಮರ್ಥ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ದೂರಿದ್ದಾರೆ.

‘ಇದೀಗ ಪೂರ್ವಬಾವಿ ಪರೀಕ್ಷೆಯಲ್ಲಿನ ಮರು ಪರೀಕ್ಷೆಯ 2 ಪತ್ರಿಕೆಗಳಲ್ಲಿ 79 ದೋಷಗಳಿದ್ದರೂ ಕೆಪಿಎಸ್ಸಿ ಕೇವಲ 5 ಪ್ರಶ್ನೆಗಳಿಗೆ ಮಾತ್ರ ಕೃಪಾಂಕ ನೀಡುವ ಮೂಲಕ ಕನ್ನಡ ಮಾಧ್ಯಮದ ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಿದೆ. ಕೆಪಿಎಸ್ಸಿಯ ನಿರಂತರ ಯಡವಟ್ಟುಗಳನ್ನು ಸಹಿಸದೇ ಈ ಭ್ರಷ್ಟ ಹಾಗೂ ದಪ್ಪ ಚರ್ಮದ ಸರಕಾರದ ಮೇಲೆ ಕಿಂಚಿತ್ತೂ ನಂಬಿಕೆಯಿಲ್ಲದೆ ಪರೀಕ್ಷಾರ್ಥಿಗಳು ನ್ಯಾಯಾಲಯದ ಮೊರೆ ಹೋಗಿರುವುದು ಈ ಸರಕಾರದ ಅಸಡ್ಡೆತನವನ್ನು ಸಾಕ್ಷೀಕರಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News