ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ ಅಗತ್ಯವಿಲ್ಲ: ಕೃಷ್ಣಭೈರೇಗೌಡ

Update: 2025-03-19 18:36 IST
ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ ಅಗತ್ಯವಿಲ್ಲ: ಕೃಷ್ಣಭೈರೇಗೌಡ
  • whatsapp icon

ಬೆಂಗಳೂರು : ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ ಮಾಡುವ ಅಗತ್ಯವಿಲ್ಲ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಬುಧವಾರ ವಿಧಾನಪರಿಷತ್‍ನ ಪ್ರಶೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಜವರಾಯಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ನೇರವಾಗಿ ಯೋಜನಾ ನಕ್ಷೆ ಮಂಜೂರಾತಿಯನ್ನು ಪಡೆಯಬಹುದಾಗಿದೆ. ವಸತಿ ಪ್ರದೇಶ ಇರುವ ಕಡೆ ಭೂ ಪರಿವರ್ತನೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಒಂದು ವೇಳೆ ಕೃಷಿ ಭೂಮಿ ಇದ್ದರೆ ಮಾತ್ರ ಭೂ ಪರಿವರ್ತನೆ ಮಾಡಲಾಗುವುದು. ಸ್ವಂತ ಜಮೀನಿನಲ್ಲಿ ಶೇ.10ರಷ್ಟು ಮನೆಗಳನ್ನು ಕಟ್ಟಿಕೊಳ್ಳಲು ಅವಕಾಶವಿದೆ. ಆದರೆ, ಬಡಾವಣೆ ನಿರ್ಮಾಣ ಮಾಡಿದರೆ ಸಮಸ್ಯೆಯಾಗುತ್ತದೆ. ಇದರ ನಿವಾರಣೆಗೆ ಬಿ ಖಾತೆ ಕೊಡುವ ವಿಧೇಯಕವನ್ನು ತರಲಾಗುತ್ತಿದ್ದು, ಈಗಾಗಲೇ ವಿಧಾನಸಭೆಯಲ್ಲಿ ಮಂಡಿಸಲಾಗಿದೆ ಎಂದು ಕೃಷ್ಣಭೈರೇಗೌಡ ಹೇಳಿದರು.

ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮ ಠಾಣಾ ಹಾಗೂ ಊರುಗುಪ್ಪೆ ಸರ್ವೆ ನಂಬರ್‌ಗಳಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ನಿವಾಸಿಗಳಿಗೆ ಸಂಬಂಧಿಸಿದ ಹಕ್ಕುಪತ್ರ ನೀಡುವ ಬಗ್ಗೆ ಗ್ರಾ.ಪಂ.ಗಳಿಂದ ನಿಯಮಾನುಸಾರ ಕ್ರಮ ವಹಿಸಲಾಗುತ್ತದೆ. ಕಂದಾಯ ಇಲಾಖೆಗೆ ಸೇರಿದ ಸರ್ವೇ ನಂಬರ್ ಅಥವಾ ಜಮೀನುಗಳಲ್ಲಿ ಭೂ ಕಂದಾಯ ಕಾಯ್ದೆಯಡಿ ಕ್ರಮ ವಹಿಸಲಾಗುವುದು ಎಂದು ಕೃಷ್ಣಭೈರೇಗೌಡ ತಿಳಿಸಿದರು.

2013ರ ಜೂನ್ 14ಕ್ಕೂ ಮೊದಲು ಹಾಗೂ ನಂತರ ನೊಂದಣಿಯಾದ ಎಲ್ಲಾ ನಿವೇಶನಗಳು ಮತ್ತು ಕಟ್ಟಡಗಳಿಗೆ ಇ-ಸ್ವತ್ತು ತಂತ್ರಾಂಶಗಳ ಮೂಲಕ ಖಾತೆ ನೀಡಲು ಕ್ರಮ ವಹಿಸಲಾಗಿದೆ. ಗ್ರಾಮ ಠಾಣಾಗಳಿಗೆ ಸಂಬಂಧಿಸಿದಂತೆ ಸರ್ವೆ ನಂಬರ್‌ನಲ್ಲಿರುವ ಸ್ವತ್ತು ಪಹಣಿಯಲ್ಲಿ ಗ್ರಾಮಸ್ಥರು ಎಂದು ಬಾರದಿದ್ದರೆ ಪುನಃ ಪಹಣಿ ತರುವ ಅವಶ್ಯಕತೆ ಇಲ್ಲ. ಪಹಣಿಯಲ್ಲಿ ಮಾಲಕರ ಹೆಸರು ಇದ್ದರೆ ಮಾತ್ರ ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಬಹುದು. ಗ್ರಾಮ ಠಾಣಾ ಊರುಗುಪ್ಪೆ ಸರ್ವೆ ನಂಬರ್‌ನಲ್ಲಿರುವ ಸ್ವತ್ತು ಆರ್‍ಟಿಸಿಯಲ್ಲಿ ಗ್ರಾಮಸ್ಥರೆಂದು ದಾಖಲಾಗಿದ್ದರೆ ಭೂ ಪರಿವರ್ತಿಸಲು ಅವಕಾಶ ಇಲ್ಲ ಎಂದು ಕೃಷ್ಣಭೈರೇಗೌಡ ಸ್ಪಷ್ಟಪಡಿಸಿದರು.

ಅಕ್ರಮ ಸಾಗುವಳಿ ಸಕ್ರಮವಾಗಿ ಮಂಜೂರಾಗಿ 5ರಿಂದ 20ವರ್ಷಗಳು ಕಳೆದರೂ ಖಾತೆಯಾಗದಿರುವ ಪ್ರಕರಣಗಳಿವೆ. ನೈಜವಾಗಿ ಮಂಜೂರಾಗಿ ಖಾತೆಯಾಗದಿದ್ದರೆ ಅನ್ಯಾಯವಾಗುತ್ತದೆ. ಅಂಥವರಿಗೆ ಅಲೆದಾಡಿಸುವುದು, ಶೋಷಣೆ ತಪ್ಪಿಸಲು ಕಾಲಮಿತಿಯಲ್ಲಿ ಖಾತೆ ಮಾಡಿಕೊಡಲಾಗುವುದು. ಆನ್‍ಲೈನ್ ಆಪ್ ಮೂಲಕವೂ ಖಾತೆ ನೋಂದಣಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷ್ಣಭೈರೇಗೌಡ ತಿಳಿಸಿದರು.

ಆದರೆ, ದಾಖಲೆಗಳಿಲ್ಲದೆ ಕಾನೂನು ಬಾಹಿರವಾಗಿ ಮಂಜೂರಾಗಿ ನಿರ್ಬಂಧಿಯ ಪ್ರದೇಶಗಳದೊಳಗಿದ್ದರೆ ಖಾತೆ ಮಾಡಿಕೊಡಲಾಗುವುದಿಲ್ಲ. ಅರಣ್ಯದಲ್ಲೂ ಮಂಜೂರಾಗಿದ್ದರೂ ಖಾತೆ ಮಾಡಿಕೊಡಲಾಗುವುದಿಲ್ಲ ಎಂದು ಕೃಷ್ಣಭೈರೇಗೌಡ ಸ್ಪಷ್ಟಪಡಿಸಿದರು.

ನಮೂನೆ 50ರಡಿ 3,71,436 ಅರ್ಜಿಗಳು ಮಂಜೂರಾಗಿದ್ದು 3,65,148 ಮಂದಿಗೆ ಸಾಗುವಳಿ ಚೀಟಿ ನೀಡಲಾಗಿದೆ. 3,56,488 ಮಂದಿಗೆ ಖಾತೆ ಮಾಡಿ ಕೊಡಲಾಗಿದೆ. 8,772 ಅರ್ಜಿಗಳು ಖಾತೆ ಮಾಡಲು ಬಾಕಿ ಇವೆ. ನಮೂನೆ 53ರಲ್ಲಿ 9,806 ಹಾಗೂ ನಮೂನೆ 57ರಲ್ಲಿ 614 ಅರ್ಜಿಗಳು ಖಾತೆಗಾಗಿ ರಾಜ್ಯದಲ್ಲಿ ಬಾಕಿ ಉಳಿದಿವೆ ಎಂದು ಕೃಷ್ಣಭೈರೇಗೌಡ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News