ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ಯುವತಿಯ ಜೊತೆ ಅನುಚಿತ ವರ್ತನೆ; ನಿರ್ವಾಹಕನನ್ನು ವಜಾ ಮಾಡಲು ಸಚಿವ ರಾಮಲಿಂಗಾರೆಡ್ಡಿ ಸೂಚನೆ

ಬೆಂಗಳೂರು: ಗುರುವಾರದಂದು ಮಂಗಳೂರು ವಿಭಾಗದ ಕೆಎಸ್ಸಾರ್ಟಿಸಿ ಬಸ್‍ನಲ್ಲಿ ನಿರ್ವಾಹಕರೊಬ್ಬರು ಮಹಿಳಾ ಪ್ರಯಾಣಿಕರೊಡನೆ ಕೆಟ್ಟದಾಗಿ ವರ್ತಿಸಿದ್ದು, ನಿರ್ವಾಹಕನ್ನು ಸೇವೆಯಿಂದ ವಜಾ ಮಾಡಲು ಕ್ರಮ ವಹಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ಕೆಎಸ್ಸಾರ್ಟಿಸಿ ನಿರ್ವಾಹಕನೊಬ್ಬ ಮಹಿಳಾ ಪ್ರಯಾಣಿಕರೊಡನೆ ಕೆಟ್ಟದಾಗಿ ನಡೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೇಲ್ನೋಟಕ್ಕೆ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ನಿರ್ವಾಹಕನನ್ನು ಅಮಾನತ್ತು ಮಾಡಲಾಗಿದೆ. ಆದರೆ ಬಸ್ಸಿನಲ್ಲಿ ಪ್ರಯಾಣಿಸುವ ಪ್ರತಿ ಹೆಣ್ಣುಮಕ್ಕಳೊಡನೆ ಗೌರವದೊಂದಿಗೆ ನಡೆದುಕೊಳ್ಳುವುದು ನಮ್ಮ ಸಿಬ್ಬಂದಿಗಳ ಆದ್ಯ ಕರ್ತವ್ಯವಾಗಬೇಕು. ಈ ರೀತಿಯ ಅಸಹ್ಯಕರ ನಡವಳಿಕೆ ಅಕ್ಷಮ್ಯ ಅಪರಾಧವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೆಎಸ್ಸಾರ್ಟಿಸಿ ಬಸ್ಸು ಹಾಗೂ ಚಾಲಕ, ನಿರ್ವಾಹಕರ ಬಗ್ಗೆ ಸಾರ್ವಜನಿಕರು ನಂಬಿಕೆ ಮತ್ತು ಪ್ರೀತಿ ಹೊಂದಿರುತ್ತಾರೆ. ಕೆಲವೊಬ್ಬರು ಮಾಡುವ ಈ ರೀತಿಯ ಕೆಲಸಗಳು ಸಂಸ್ಥೆ ಮತ್ತು ಸಿಬ್ಬಂದಿಗಳ ಗೌರವಕ್ಕೆ ಧಕ್ಕೆ ತರುವಂತಹದು. ಹೀಗಾಗಿ ಮಂಗಳೂರು ವಿಭಾಗದ ನಿರ್ವಾಹಕನ ಅನುಚಿತ ವರ್ತನೆಯ ಬಗ್ಗೆ ಕೂಡಲೇ ವಿಚಾರಣಾ ಪ್ರಕ್ರಿಯೆ ಪ್ರಾರಂಭಿಸಿ, ತ್ವರಿತವಾಗಿ ವಿಚಾರಣೆ ಮುಗಿಸಿ, ಆ ನಿರ್ವಾಹಕನನ್ನು ಸೇವೆಯಿಂದ ವಜಾ ಮಾಡಲು ಕ್ರಮ ವಹಿಸಬೇಕು ಎಂದು ಸಚಿವರು ಹೇಳಿದ್ದಾರೆ.
ಏನಿದು ಘಟನೆ :
ಮಂಗಳೂರು- ಮುಡಿಪು ಮಾರ್ಗವಾಗಿ ಸಂಚರಿಸುವ ಸರಕಾರಿ ಬಸ್ಸೊಂದರಲ್ಲಿ ನಿದ್ದೆಗೆ ಜಾರಿದ್ದ ಪ್ರಯಾಣಿಕ ಯುವತಿಯೊಬ್ಬಳ ಜೊತೆಗೆ ನಿರ್ವಾಹಕ ಅನುಚಿತವಾಗಿ ವರ್ತಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಹಿನ್ನಲೆಯಲ್ಲಿ ಬಾಗಲಕೋಟೆ ಮೂಲದ ಬಸ್ ನಿರ್ವಾಹಕ ಪ್ರದೀಪ್ ಎಂಬಾತನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದಿದ್ದರು.
ಬುಧವಾರ ಮುಡಿಪುವಿನಿಂದ ಮಂಗಳೂರಿಗೆ ಈ ಸರಕಾರಿ ಬಸ್ ಸಂಚರಿಸುವ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಆರೋಪಿ ಬಸ್ ನಿರ್ವಾಹಕ ಪ್ರದೀಪ್ ಪ್ರಯಾಣದ ವೇಳೆ ನಿದ್ದೆಗೆ ಜಾರಿದ್ದ ಯುವತಿಯೊಬ್ಬಳನ್ನು ಖಾಸಗಿ ಭಾಗವನ್ನು ಸ್ಪರ್ಶಿಸಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಸಹ ಪ್ರಯಾಣಿಕರೊಬ್ಬರು ಈ ದೃಶ್ಯವನ್ನು ಸೆರೆ ಹಿಡಿದಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು.