ಕೆಎಸ್ಸಾರ್ಟಿಸಿ ವಿದ್ಯಾರ್ಥಿ ಬಸ್ ಪಾಸ್: ಆನ್‍ಲೈನ್ ಅರ್ಜಿ ಸಲ್ಲಿಸಲು ಅವಕಾಶ

Update: 2024-05-31 16:26 GMT
ಸಾಂದರ್ಭಿಕ ಚಿತ್ರ 

ಬೆಂಗಳೂರು: 2024-25ನೆ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳು ಪ್ರಾರಂಭವಾಗಿದ್ದು, ಕೆಎಸ್ಸಾರ್ಟಿಸಿ ವಿದ್ಯಾರ್ಥಿ ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬೇಕಿರುತ್ತದೆ ಎಂದು ನಿಗಮವು ತಿಳಿಸಿದೆ.

ಪ್ರಸಕ್ತ ವರ್ಷದಲ್ಲಿ ಸರಕಾರದ ಆದೇಶದಂತೆ ಸಂಪೂರ್ಣ ಗಣಕೀಕೃತವಾಗಿ ವಿದ್ಯಾರ್ಥಿ ಬಸ್ ಪಾಸ್‍ಗಳನ್ನು ವಿತರಿಸಲಾಗುವುದು. ಪಾಸು ಪಡೆಯಲು ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬೇಕಿದ್ದು, ಸೇವಾಸಿಂಧು ಪೋರ್ಟಲ್ ಐಡಿ https://sevasindhuservices.karnataka.gov.in/buspassservices/ ಮುಖೇನ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ.

ವಿದ್ಯಾರ್ಥಿಗಳು ಮೇ 31ರಿಂದ ಸೇವಾಸಿಂಧು ಪೋರ್ಟಲ್‍ನಲ್ಲಿ ಬಸ್ ಪಾಸ್‍ಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆನ್‍ಲೈನ್ ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.

ಇದಲ್ಲದೆ, ವಿದ್ಯಾರ್ಥಿಗಳು, ಕರ್ನಾಟಕ-ಒನ್, ಗ್ರಾಮ-ಒನ್ ಮತ್ತು ಬೆಂಗಳೂರು-ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳ ಮೂಲಕವು ಅರ್ಜಿ ಸಲ್ಲಿಸಬಹುದಾಗಿದೆ. ಈ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಸರಕಾರದ ಆದೇಶದಂತೆ 30 ರೂ. ಸೇವಾ ಶುಲ್ಕವನ್ನು ಕೇಂದ್ರಗಳ ಸಿಬ್ಬಂದಿಗಳು ಪಡೆಯಲು ಅವಕಾಶವಿರುತ್ತದೆ.

ಅರ್ಜಿ ಅನುಮೋದನೆಯಾದ ವಿದ್ಯಾರ್ಥಿಗಳಿಗೆ ಪಾಸು ಪಡೆಯಲು ಭೇಟಿ ನೀಡಬೇಕಿರುವ ಕೌಂಟರ್ ನ ಹೆಸರು, ವಿಳಾಸ ಮಾಹಿತಿಯನ್ನು ಅರ್ಜಿಯಲ್ಲಿ ನೀಡಲಾದ ಮೊಬೈಲ್ ಸಂಖ್ಯೆಗೆ ಎಸ್‍ಎಂಎಸ್ ಮುಖೇನ ಕಳುಹಿಸಲಾಗುವುದು. ವಿದ್ಯಾರ್ಥಿ ಪಾಸುಗಳನ್ನು ಜೂ.1ರಿಂದ ನಿಗದಿತ ಪಾಸ್ ಕೌಂಟರ್ ಗಳಲ್ಲಿ ವಿತರಿಸಲಾಗುವುದು.

ಸರಕಾರವು ರಾಜ್ಯದ ಮಹಿಳೆಯರಿಗೆ(ವಿದ್ಯಾರ್ಥಿನಿಯರು, ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ) ಶಕ್ತಿ ಯೋಜನೆಯಡಿ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸಿರುತ್ತದೆ. ಆದರೆ, ನೆರೆರಾಜ್ಯದಲ್ಲಿ ವಾಸವಿದ್ದು, ಕರ್ನಾಟಕ ರಾಜ್ಯದ ಶಾಲೆ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಕರ್ನಾಟಕ ರಾಜ್ಯದಲ್ಲಿ ವಾಸವಿದ್ದು, ನೆರೆ ರಾಜ್ಯದ ಶಾಲೆ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ, ಗಡಿಭಾಗದ ಮಾರ್ಗಗಳಲ್ಲಿನ ವಿದ್ಯಾರ್ಥಿನಿಯರು ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ಪಡೆಯುವ ಅಗತ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News