ಬೆಳಗಾವಿ: ಹಿಂಸಾಚಾರಕ್ಕೆ ತಿರುಗಿದ ಲಿಂಗಾಯತ ಪಂಚಮಸಾಲಿ ಸಮಾಜದ ಬೃಹತ್ ಹೋರಾಟ
ಬೆಳಗಾವಿ(ಸುವರ್ಣ ವಿಧಾನಸೌಧ): ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ 2 ‘ಎ’ ಅಡಿಯಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿ ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿಯಿರುವ ಕೊಂಡಸಕೊಪ್ಪ ಗುಡ್ಡದಲ್ಲಿ ಕೂಡಲಸಂಗಮದ ಪಂಚಮಸಾಲಿ ಗುರುಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿ ನೇತೃತ್ವದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಟ್ರ್ಯಾಕ್ಟರ್ ರ್ಯಾಲಿ’ ಬೃಹತ್ ಹೋರಾಟವು ಹಿಂಸಾಚಾರಕ್ಕೆ ತಿರುಗಿತು.
ಇದಕ್ಕೂ ಮುನ್ನ ಕೊಂಡಸಕೊಪ್ಪ ಗುಡ್ಡದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾನಿರತರು, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳಕ್ಕೆ ಭೇಟಿ ನೀಡಿ ನಮ್ಮ ಮನವಿಯನ್ನು ಸ್ವೀಕರಿಸಿ, ಆಶ್ವಾಸನೆ ನೀಡಬೇಕು ಎಂದು ಒತ್ತಾಯಿಸಿದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಡಾ.ಎಂ.ಸಿ.ಸುಧಾಕರ್, ಕೆ.ವೆಂಕಟೇಶ್ ಅವರಿದ್ದ ನಿಯೋಗವನ್ನು ಪ್ರತಿಭಟನಾ ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದರು.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತವಾಗಿ ನಡೆಯುವ ಹೋರಾಟವನ್ನು ಅಡ್ಡಿಪಡಿಸುವ ಯಾವುದೇ ಪ್ರಶ್ನೆ ಇಲ್ಲ. ನ್ಯಾಯಾಲಯದ ಆದೇಶ, ಕಾನೂನು, ಸಂವಿಧಾನವನ್ನು ಗಮನದಲ್ಲಿ ಇಟ್ಟುಕೊಂಡು ಮೀಸಲಾತಿ ಕುರಿತು ಚರ್ಚೆ ಮಾಡಲಾಗುತ್ತಿದೆ. ಗುರುವಾರ ಈ ವಿಚಾರ ಸದನದಲ್ಲಿ ಚರ್ಚೆ ಮಾಡುತ್ತೇವೆ. ಕಾನೂನು ಕೈಗೆ ತೆಗೆದುಕೊಳ್ಳುವ ಯತ್ನ ಯಾರು ಮಾಡಬಾರದು. ನಿಮ್ಮ ಎಲ್ಲ ವಿಚಾರವನ್ನು ಮುಖ್ಯಮಂತ್ರಿಯ ಗಮನಕ್ಕೆ ತರುತ್ತೇವೆ’ ಎಂದು ಸಚಿವ ಡಾ.ಮಹದೇವಪ್ಪ ಆಶ್ವಾಸನೆ ನೀಡಿದರು.
ಆದರೆ, ಡಾ.ಮಹದೇವಪ್ಪ ಭರವಸೆಗೆ ಒಪ್ಪದ ಜಯಮೃತುಂಜಯ ಸ್ವಾಮೀಜಿ, ‘ಸುವರ್ಣ ವಿಧಾನಸೌಧದ ಆವರಣದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ವರೆಗೆ ಹೋಗೋಣ’ ಎಂದು ಪ್ರತಿಭಟನಾನಿರತರಿಗೆ ಹೇಳುವ ಮೂಲಕ ಪರೋಕ್ಷವಾಗಿ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕುವ ಕರೆ ನೀಡಿದ್ದಾರೆ.
ಸುವರ್ಣ ವಿಧಾನಸೌಧದತ್ತ ಸಹಸ್ರಾರು ಪಂಚಮಸಾಲಿ ಮೀಸಲಾತಿ ಪ್ರತಿಭಟನಾಕಾರರು ನುಗ್ಗಲಾರಂಭಿಸಿದ್ದಾರೆ. ಈ ವೇಳೆ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತು. ಪೊಲೀಸರು ಬ್ಯಾರಿಕೇಡ್ ಹಾಕಿ ಪ್ರತಿಭಟನಾನಿರತರನ್ನು ತಡೆಯಲು ಮುಂದಾದರು. ಆದರೆ, ಪ್ರತಿಭಟನಾನಿರತರು ಬ್ಯಾರಿಕೇಡ್‍ಗಳನ್ನು ಕಿತ್ತೆಸೆದು ಸುವರ್ಣ ವಿಧಾನಸೌಧದತ್ತ ಮುನ್ನುಗಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ತಡೆಯಲು, ಪರಿಸ್ಥಿತಿ ನಿಯಂತ್ರಿಸಲು ಐಜಿಪಿ ಹಿತೇಂದ್ರ ಕುಮಾರ್ ಲಾಠಿಚಾರ್ಜ್ ಮಾಡಲು ಆದೇಶ ಮಾಡಿದರು.
ಪ್ರತಿಭಟನಾನಿರತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸುತ್ತಿದಂತೆ ಕೆರಳಿದ ಪ್ರತಿಭಟನಾನಿರತರು, ಪೊಲೀಸರು ಹಾಗೂ ಶಾಸಕರ ವಾಹನಗಳ ಮೇಲೆ ಏಕಾಏಕಿ ಕಲ್ಲು ತೂರಾಟ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು, ಸ್ವಾಮೀಜಿಯನ್ನು ಭೇಟಿ ಮಾಡಿ, ಹೋರಾಟ ಕೈ ಬಿಡುವಂತೆ ಮನವಿ ಮಾಡಿದ್ದಾರೆ.
ಆದರೆ, ಸ್ವತಃ ಬಸವಜಯ ಮೃತ್ಯುಂಜಯ ಸ್ವಾಮಿ ಪ್ರತಿಭಟನೆಗೆ ಇಳಿದಿದ್ದಾರೆ. ಅವರಿಗೆ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಸೇರಿದಂತೆ ಹಲವರು ಬೆಂಬಲ ನೀಡಿದರು. ಇದರಿಂದಾಗಿ, ಪೊಲೀಸರು ಅವರನ್ನು ವಶಕ್ಕೆ ಪಡೆದು ಕರೆದೊಯ್ದರು.
ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು. ಘಟನೆಯಲ್ಲಿ ಹಲವಾರು ಮಂದಿ ಪ್ರತಿಭಟನಾನಿರತರು ಹಾಗೂ ಪೊಲೀಸರಿಗೆ ಗಾಯಗಳಾಗಿದ್ದ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮಾಹಿತಿ ಪಡೆದ ಸಿಎಂ: ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾನಿರತರ ಮೇಲೆ ನಡೆದ ಲಾಠಿ ಚಾರ್ಜ್ ಕುರಿತು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಅವರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ಪಡೆದುಕೊಂಡರು.
ಕೊಂಡಸಕೊಪ್ಪ ಗುಡ್ಡದಲ್ಲಿ ನಡೆದ ಪ್ರತಿಭಟನಾ ಸಭೆಯ ವೇದಿಕೆಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಅವರೊಂದಿಗೆ ಮಾಜಿ ಸಚಿವ ಸಿ.ಸಿ.ಪಾಟೀಲ್, ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್, ಶಾಸಕ ಸಿದ್ದು ಸವದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವಿಜಯೇಂದ್ರ ವಿರುದ್ಧ ಧಿಕ್ಕಾರ ಘೋಷಣೆ: ಲಿಂಗಾಯತ ಪಂಚಮಸಾಲಿ ಹೋರಾಟದ ವೇದಿಕೆಗೆ ವಿಜಯೇಂದ್ರ ಆಗಮಿಸುತ್ತಿದ್ದ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲಿಗರು, ವಿಜಯೇಂದ್ರ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದ, ಕೆರಳಿದ ಸಿದ್ದು ಸವದಿ, ಧಿಕ್ಕಾರ ಕೂಗಿದವರ ವಿರುದ್ಧ ಆಕ್ರೋಶ ಹೊರ ಹಾಕಿದರು. ಕೆಲಕಾಲ ಸ್ಥಳದಲ್ಲಿ ಗೊಂದಲ ವಾತಾವರಣವು ನಿರ್ಮಾಣವಾಗಿತ್ತು.
ಟ್ರ್ಯಾಕ್ಟರ್‍ಗಳಲ್ಲಿ ಬರುತ್ತಿದ್ದವರನ್ನು ವಶಕ್ಕೆ ಪಡೆದ ಪೊಲೀಸರು: ಪ್ರತಿಭಟನಾ ಸಭೆಗೆ ಸುಮಾರು 50ಕ್ಕೂ ಹೆಚ್ಚು ಟ್ರ್ಯಾಕ್ಟರ್‍ಗಳಲ್ಲಿ ಆಗಮಿಸುತ್ತಿದ್ದವರನ್ನು ಹಿರೇಬಾಗೇವಾಡಿಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡರು. ಜಿಲ್ಲಾಡಳಿತವು ಟ್ರ್ಯಾಕ್ಟರ್ ರ್ಯಾಲಿಗೆ ನಿಷೇಧ ಹೇರಿದ್ದರೂ ಹೋರಾಟಗಾರರು ಟ್ರ್ಯಾಕ್ಟರ್‍ಗಳಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸುತ್ತಿದ್ದರು.
‘ಲಿಂಗಾಯತ ಪಂಚಮಸಾಲಿ ಸಮುದಾಯದ 10 ಮಂದಿ ಮುಖಂಡರನ್ನು ಮಾತುಕತೆಗೆ ಬರುವಂತೆ ಆಹ್ವಾನ ನೀಡಿದ್ದೆ. ಆದರೆ, ಯಾರೊಬ್ಬರೂ ಬರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕಿದೆ. ಆದರೆ, ಹಿಂಸಾಚಾರಕ್ಕೆ ಯಾರೊಬ್ಬರೂ ಮುಂದಾಗಬಾರದು’
-ಸಿದ್ದರಾಮಯ್ಯ, ಮುಖ್ಯಮಂತ್ರಿ
‘ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ನಾನು ಎಂದಿಗೂ ಸಮುದಾಯದ ಪರ ನಿಲ್ಲುತ್ತೇನೆ. ಅಧಿಕಾರಕ್ಕಿಂತ ಸಮಾಜದ ಹಿತಾಸಕ್ತಿ ಮುಖ್ಯ. ಸಮಾಜ ಇದ್ದರೆ ನಾವೆಲ್ಲ ಇರುತ್ತೇವೆ. ಮುಖಂಡರಿಗೆ ಎಲ್ಲ ವಿಚಾರ ಹೇಳಿದ್ದೇನೆ. ಸರಕಾರ ಯಾವುದೇ ಇರಲಿ, ಪಂಚಮಸಾಲಿ ಸಮಾಜದ ಬಹಳಷ್ಟು ಜನ ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಸಮಾಜಕ್ಕೆ ನ್ಯಾಯ ಸಿಗಬೇಕು. ಮೀಸಲಾತಿ ವಿಚಾರವಾಗಿ ಪದೇ ಪದೆ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇವೆ. 2 ಎ ಮೀಸಲಾತಿ ಸಿಗಲಿ, ಖಂಡಿತ ಹೋರಾಟಕ್ಕೆ ಜಯ ಸಿಗುತ್ತದೆ’
-ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ
‘ರಾಜ್ಯ ಸರಕಾರ ಲಾಠಿ ಚಾರ್ಜ್ ಆದರೂ ಮಾಡಲಿ, ಏನಾದರೂ ಮಾಡಲಿ. ನಮಗೆ ನ್ಯಾಯ ಸಿಗುವವರೆಗೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇಂತಹ ಲಾಠಿ ಚಾರ್ಜ್‍ಗಳಿಗೆ ನಾವು ಜಗ್ಗಲ್ಲ, ಬಗ್ಗಲ್ಲ’
-ಶ್ರೀ ಬಸವಜಯ ಮೃತ್ಯುಂಜಯಸ್ವಾಮಿ, ಕೂಡಲಸಂಗಮದ ಪಂಚಮಸಾಲಿ ಗುರುಪೀಠ
‘ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟದ ಸ್ವರೂಪದ ಕುರಿತು ಈ ಮುಂಚೆಯೇ ಸರಕಾರದ ಅರಿವಿಗೆ ಬಂದಿದ್ದರೂ ಯಾವುದೇ ಮುಂಜಾಗ್ರತಾ ಕ್ರಮ ವಹಿಸದೆ, ಸಕಾರಾತ್ಮಕ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಹುಡುಕುವ ಮಾರ್ಗೋಪಾಯಗಳನ್ನು ಕಂಡುಹಿಡಿಯದೇ ಚಳುವಳಿ ತೀವ್ರ ಸ್ವರೂಪ ಪಡೆಯಲು ಸರಕಾರ ಕಾರಣವಾಗಿದೆ. ಕಾಂಗ್ರೆಸ್ ಸರಕಾರದ ಅಸಮರ್ಥ ನಡೆ ಈ ಹಿಂದಿನ ರೈತ ಚಳುವಳಿಗಳನ್ನು ಬಗ್ಗುಬಡಿದ ಮಾದರಿಯನ್ನು ನೆನಪಿಸುತ್ತಿದೆ. ಕೂಡಲೇ ಸರಕಾರ ಈ ಸಂಬಂಧವಾಗಿ ಬೇಜವಾಬ್ದಾರಿಯಿಂದ ವರ್ತಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಿ, ಅಮಾಯಕರ ಮೇಲೆ ಹಲ್ಲೆ ಆಗಿರುವ ಕುರಿತು ಕ್ಷಮೆಯಾಚಿಸಲಿ. ಮಾರಣಾಂತಿಕ ಪೆಟ್ಟು ತಿಂದವರಿಗೆ ಸೂಕ್ತ ಚಿಕಿತ್ಸೆ ಹಾಗೂ ಪರಿಹಾರವನ್ನು ಒದಗಿಸಲಿ’
-ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ