ಕುಮಾರಸ್ವಾಮಿ ಕೇಸರಿ ಶಾಲು ಹಾಕುವ ಬದಲು ನಮ್ಮ ಪಕ್ಷದ ಶಾಲು ಹಾಕಬಹುದಿತ್ತು: ಎಚ್.ಡಿ ದೇವೇಗೌಡ
ಹೊಸದಿಲ್ಲಿ: ಮಂಡ್ಯದ ಕೆರಗೋಡ ಗ್ರಾಮದ ಕೇಸರಿ ಧ್ವಜ ತೆರವು ವಿವಾದದ ಕುರಿತಂತೆ ಬಿಜೆಪಿ ಪಕ್ಷದ ಪ್ರತಿಭಟನೆ ಸಂದರ್ಭ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕೇಸರಿ ಶಾಲು ಧರಿಸಿದ್ದನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ಖಂಡಿಸಿದ್ದಾರೆ.
ಇಂದು ಹೊಸದಿಲ್ಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಕೇಸರಿ ಶಾಲು ಹಾಕುವ ಬದಲು ನಮ್ಮ ಪಕ್ಷದ ಶಾಲು ಹಾಕಬಹುದಿತ್ತು ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಜೊತೆಗೆ ಹೋದಾಗಲೂ ನನ್ನ ಪಕ್ಷದ ಶಾಲು ಹಾಕುತ್ತೇನೆ. ನಾನು ಖಂಡಿತವಾಗಿ ಕೇಸರಿ ಶಾಲು ಹಾಕುವುದಿಲ್ಲ. ಪ್ರತಿಭಟನೆಯ ವೇಳೆ ಯಾರೋ ಬಂದು ಕೇಸರಿ ಶಾಲು ಹಾಕಿರುತ್ತಾರೆ. ದೊಡ್ಡ ವ್ಯಾಖ್ಯಾನ ನೀಡುವ ಅಗತ್ಯವಿಲ್ಲ ಎಂದು ಕುಮಾರಸ್ವಾಮಿ ಕೇಸರಿ ಶಾಲು ಹಾಕಿರುವುದನ್ನು ಬಳಿಕ ಸಮರ್ಥಿಸಿಕೊಂಡರು.
ಡಿ.ಕೆ ಸುರೇಶ್ ಹೇಳಿಕೆ ವ್ಯಕ್ತಿಗತವಾಗಿರಬಹುದು
ಸಂಸದ ಡಿಕೆ ಸುರೇಶ್ ಅವರ ಪ್ರತ್ಯೇಕ ರಾಷ್ಟ್ರ ಹೇಳಿಕೆಯು ಅವರ ವ್ಯಕ್ತಿಗತವಾಗಿರಬಹುದು. ಅವರು ಯಾವ ಉದ್ದೇಶದಿಂದ ಹೇಳಿದ್ದಾರೆಂದು ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದೆ. ದೇಶದಲ್ಲಿ ಸರಕಾರ ನಡೆಸಿದೆ. ಸಂಸದರ ಹೇಳಿಕೆಯು ಕಾಂಗ್ರೆಸ್ ಪಕ್ಷದ ನಿರ್ಣಯವಲ್ಲ. ಈ ವಿಷಯದ ಬಗ್ಗೆ ಹೆಚ್ಚು ಮಾತನಾಡುವುದು ನನಗೆ ಇಷ್ಟವಿಲ್ಲ ಎಂದು ಪ್ರತಿಕ್ರಿಯಿಸಿದರು.