ಕುಮಾರಸ್ವಾಮಿ ಜೇಬಿನಲ್ಲಿದ್ದ ಪೆನ್ ಡ್ರೈವ್ ನಲ್ಲಿ ಏನಿತ್ತು ಎಂಬುದು ಈಗ ಗೊತ್ತಾಯಿತು : ಡಿ.ಕೆ.ಶಿವಕುಮಾರ್

Update: 2024-04-27 13:50 GMT

ಬೆಂಗಳೂರು : ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಾಧ್ಯಮಗಳ ಮುಂದೆ ತೋರಿಸಿ ತಮ್ಮ ಜೇಬಲ್ಲಿಟ್ಟುಕೊಂಡಿದ್ದ ಪೆನ್ ಡ್ರೈವ್ ನಲ್ಲಿ ಏನಿತ್ತು ಎಂಬುದು ಈಗ ಗೊತ್ತಾಯಿತು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಹಾಸನ ಸಂಸದರ ಪೆನ್ ಡ್ರೈವ್ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಶಿವಕುಮಾರ್ ಅವರು ಶನಿವಾರ ಉತ್ತರಿಸಿದರು.

ರಾಜ್ಯ ಮಹಿಳಾ ಆಯೋಗವು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಹಾಸನ ನಾಯಕನ ವಿರುದ್ಧ ಲೈಂಗಿಕ ಹಗರಣ ಆರೋಪ ಬರುತ್ತಿದ್ದು, ಈ ಬಗ್ಗೆ ಎಸ್ಐಟಿ ತನಿಖೆ ಮಾಡಬೇಕು ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು , “ಕುಮಾರಸ್ವಾಮಿ ಅವರು ತೋರಿಸುತ್ತಿದ್ದ ಪೆನ್ ಡ್ರೈವ್ ಯಾವುದು, ಅದರಲ್ಲಿ ಏನಿದೆ ಎಂಬುದು ಆಗ ನನಗೆ ಗೊತ್ತಿರಲಿಲ್ಲ. ಅದರಲ್ಲಿ ಏನಿದೆ ಎಂದು ಈಗ ಗೊತ್ತಾಯಿತು. ಈ ಪೆನ್ ಡ್ರೈವ್ ಬಗ್ಗೆ ಕುಮಾರಣ್ಣನಿಗೆ ಚೆನ್ನಾಗಿ ಗೊತ್ತು. ಅವರ ಜೇಬಿನಲ್ಲೇ ಇಟ್ಟುಕೊಂಡಿದ್ದನ್ನು ಮಾಧ್ಯಮದವರಿಗೆ ತೋರಿಸಿದ್ದರು. ಹೀಗಾಗಿ ಇದರ ಬಗ್ಗೆ ಕುಮಾರಸ್ವಾಮಿ ಅವರನ್ನು ನೀವು ಕೇಳಬೇಕು. ಇದಕ್ಕೆ ಉತ್ತರಿಸಲು ಅವರೇ ಸೂಕ್ತ ವ್ಯಕ್ತಿ" ಎಂದರು.

"ಮಾಧ್ಯಮಗಳು ಈ ಹಗರಣದ ವಿಚಾರದಲ್ಲಿ ಸುಳ್ಳು ಹೇಳುತ್ತಿವೆ. ಹಾಸನ ಲೋಕಸಭಾ ಕ್ಷೇತ್ರದ ಎನ್‌ಡಿಎ ಮೈತ್ರಿ ಕೂಟದ ಅಭ್ಯರ್ಥಿಯದ್ದು, ಹೀಗಾಗಿ ಈ ವಿಚಾರವಾಗಿ ಪ್ರಧಾನಮಂತ್ರಿಗಳು, ವಿಜಯೇಂದ್ರ, ಶೋಭಕ್ಕ, ಅಶೋಕ್, ಕುಮಾರಣ್ಣ, ಗಂಡಸ್ಥನದ ಬಗ್ಗೆ ಮಾತನಾಡುತ್ತಿದ್ದ ಅಶ್ವತ್ಥ್ ನಾರಾಯಣ ಅವರು ಉತ್ತರ ನೀಡಬೇಕು. ನಮ್ಮ ಹೆಸರಿಗೆ ಮಸಿ ಬಳಿಯಲು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಅವರೇ ದೂರು ಕೊಟ್ಟಿರುವ ಬಗ್ಗೆ ಮಾಧ್ಯಮಗಳಲ್ಲಿ ಓದಿದೆ. ಮಹಿಳಾ ಆಯೋಗದ ಅಧ್ಯಕ್ಷರು ಇದೆಲ್ಲವನ್ನು ನೋಡಿ ರಾಜ್ಯ ಗೃಹ ಸಚಿವರು ಹಾಗೂ ಸಿಎಂಗೆ ಪತ್ರ ಬರೆದಿದ್ದಾರೆ. ಈ ವಿಚಾರದಲ್ಲಿ ನೀವು (ಮಾಧ್ಯಮದವರು) ಯಾಕೆ ಮೌನ ತಾಳುತ್ತಿದ್ದೀರಿ?. ಈ ವಿಚಾರದಲ್ಲಿ ನೀವು ರಾಜ್ಯದ ಜನತೆಗೆ ಬೆಳಕು ಚೆಲ್ಲಬೇಕು ಎಂದು ಮನವಿ ಮಾಡುತ್ತೇನೆ” ಎಂದರು.

ಎಸ್ಐಟಿ ತನಿಖೆ ಬಗ್ಗೆ ಸರ್ಕಾರದ ನಿಲುವೇನು ಎಂದು ಕೇಳಿದಾಗ, “ಈ ಬಗ್ಗೆ ಮುಖ್ಯಮಂತ್ರಿ, ಗೃಹಮಂತ್ರಿಗಳನ್ನು ಕೇಳಬೇಕು. ನಾನು ಸರ್ಕಾರದ ಭಾಗವಾಗಿದ್ದರೂ, ಇನ್ನೂ ಈ ಬಗ್ಗೆ ಸಂಬಂಧಪಟ್ಟ ಸಚಿವರು ಹಾಗೂ ಸಿಎಂ ಜತೆ ಚರ್ಚೆ ಮಾಡಲು ಆಗಿಲ್ಲ” ಎಂದರು.

ಕುಮಾರಸ್ವಾಮಿ ಈ ಪ್ರಕರಣದಲ್ಲಿ ನನ್ನ ಹೆಸರು ಹೇಳಲಿ : ಡಿಸಿಎಂ ಸವಾಲು

ಮಹಿಳೆಯರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ, ಅವರಿಗೆ ಒಳ್ಳೆಯದಾಗುತ್ತಾ ಎಂದು ಕುಮಾರಸ್ವಾಮಿ ಅವರು ನಿಮ್ಮ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ ಎಂದು ಮಾಧ್ಯಮಗಳ ಕೇಳಿದಾಗ, “ಅವರು ನನ್ನ ಹೆಸರು ಹೇಳಿ ಮಾತನಾಡಲಿ. ಆಮೇಲೆ ನನ್ನ ಪುರಾಣ, ನನ್ನ ಕಥೆ, ನನ್ನ ನುಡಿಮುತ್ತುಗಳನ್ನು ಹೇಳುತ್ತೇನೆ. ಹಾಗಾದರೆ ಆ ಹೆಣ್ಣು ಮಕ್ಕಳ ಮಾನ ಹರಣವಾಗಿರುವುದನ್ನು ಕುಮಾರಸ್ವಾಮಿ ಅವರು ಈ ರೀತಿ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರಾ?” ಎಂದು ಮರುಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News