ನಮ್ಮನ್ನು ಸರ್ವನಾಶ ಮಾಡುವುದು ಕುಮಾರಸ್ವಾಮಿ ಅವರ ನಿತ್ಯದ ಆಲೋಚನೆ : ಡಿ.ಕೆ.ಶಿವಕುಮಾರ್ ತಿರುಗೇಟು

Update: 2024-07-27 09:32 GMT

ಬೆಂಗಳೂರು : “ನಮ್ಮನ್ನು ಸರ್ವನಾಶ ಮಾಡುವುದು ಕುಮಾರಸ್ವಾಮಿ ಅವರ ನಿತ್ಯದ ಆಲೋಚನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳು, ರಾಮನಗರ ಹೆಸರು ಬದಲಾವಣೆ ಮಾಡಲು ಹೊರಟಿರುವವರು ಸರ್ವನಾಶವಾಗುತ್ತಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ  ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಕುಮಾರಸ್ವಾಮಿ ಅವರು ನಮ್ಮನ್ನು ಸರ್ವನಾಶ ಮಾಡಲು ಪ್ರತಿನಿತ್ಯ ರಾಜಕಾರಣ ಮಾಡುತ್ತಿದ್ದಾರೆ. ಅವರ ನಡೆ, ಹೆಜ್ಜೆ, ಭಾವನೆ, ಚಿಂತನೆ, ಅವರ ಆಚಾರ, ವಿಚಾರ ಎಲ್ಲವೂ ನಮಗೆ ಗೊತ್ತಿದೆ. ನಾವು ರಾಮನಗರದ ಹೆಸರನ್ನು ಬದಲಿಸುತ್ತಿಲ್ಲ. ಇದು ನಮ್ಮ ಜಿಲ್ಲೆ. ಇವರು ಬಂದು ಅಕ್ರಮವಾಗಿ ಜಿಲ್ಲೆಯ ಗುರುತನ್ನು ಬದಲಿಸಿದ್ದಾರೆ. ರಾಜಕೀಯವಾಗಿ ಇದಕ್ಕೆ ಅವಕಾಶವಿದೆ. ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ ತಾಲೂಕಿನ ಜನ ನಮ್ಮವರು, ಬೆಂಗಳೂರಿನವರು” ಎಂದು ವಾಗ್ದಾಳಿ ನಡೆಸಿದರು.

“ನಾನು ಬೆಂಗಳೂರು ಜಿಲ್ಲಾ ಪಂಚಾಯ್ತಿ ಸದಸ್ಯನಾಗಿದ್ದೆ. ಕುಮಾರಸ್ವಾಮಿ ಹಾಗೂ ದೇವೇಗೌಡರು ಹಾಸನದಿಂದ ಬಂದಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಅವರು ಇಲ್ಲಿಗೆ ಬಂದಾಗ ಇದು ಬೆಂಗಳೂರಾಗಿಯೇ ಇತ್ತು. ಅವರು ಪ್ರಧಾನಮಂತ್ರಿ, ಮುಖ್ಯಮಂತ್ರಿಯಾದಾಗಲೂ ಇದು ಬೆಂಗಳೂರಾಗಿಯೇ ಇತ್ತು. ಇದು ನಮ್ಮ ಜಿಲ್ಲೆ. ನಾವು ಭಾರತೀಯರು ಎಂದು ಹೇಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೋ, ಅದೇ ರೀತಿ ನಾವು ಬೆಂಗಳೂರಿನವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದಾಗ ಜಿಲ್ಲೆಯನ್ನು ಒಡೆದು ಬೇರೆ ಹೆಸರು ಕೊಟ್ಟರು” ಎಂದು ತಿಳಿಸಿದರು.

“ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ಕಟ್ಟಿದ್ದು ಬೆಂಗಳೂರಿನಲ್ಲಿ, ರಾಮಕೃಷ್ಣ ಹೆಗಡೆ ಅವರು ಬಂದು ನಿಂತಿದ್ದು ಬೆಂಗಳೂರಿನಲ್ಲಿ. ಈ ಬೆಂಗಲೂರು ನಾಲ್ಕೈದು ಮುಖ್ಯಮಂತ್ರಿಗಳನ್ನು ಮಾಡಿದೆ. ನಮ್ಮ ಜಿಲ್ಲೆಯನ್ನು ಪ್ರತ್ಯೇಕ ಜಿಲ್ಲೆಯಾಗಿ ಮಾಡುವಾಗ ಬೆಂಗಳೂರು ಹೆಸರು ಉಳಿಸಿಕೊಳ್ಳುವಂತೆ ನಾವು ಸಲಹೆ ನೀಡಿದ್ದೆವು. ಬೆಂಗಳೂರು ಇಂದು ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ನಮ್ಮ ಪೂರ್ವಜರು ಕೊಟ್ಟಿರುವ ಈ ಹೆಸರನ್ನು ನಾವು ಯಾಕೆ ಕಳೆದುಕೊಳ್ಳಬೇಕು?” ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಹಣೆಯಲ್ಲಿ ಬರೆದಿಲ್ಲ, 2028ಕ್ಕೆ ಕಾಂಗ್ರೆಸ್ ಸರ್ಕಾರ:

2028ರ ಒಳಗೆ ನಾವು ಬಂದು ಮತ್ತೆ ರಾಮನಗರ ಎಂದು ಮರುನಾಮಕರಣ ಮಾಡುತ್ತೇವೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅದು ಅವರ ಹಣೆಯಲ್ಲಿ ಬರೆದಿಲ್ಲ. 2028ರಲ್ಲೂ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಬೇಕಿದ್ದರೆ ಈ ಮಾತನ್ನು ಬರೆದಿಟ್ಟುಕೊಳ್ಳಿ” ಎಂದು ಸವಾಲೆಸೆದರು.

"ಗ್ರೇಟರ್ ಬೆಂಗಳೂರು" ಎಲ್ಲಾ ಪಕ್ಷದವರ ಸಲಹೆ, ಅಭಿಪ್ರಾಯ ಸ್ವೀಕರಿಸುತ್ತೇವೆ:

ಗ್ರೇಟರ್ ಬೆಂಗಳೂರು ವಿಧೇಯಕವನ್ನು ಬಾಕಿ ಇಡಲಾಗಿದೆ ಎಂದು ಕೇಳಿದಾಗ, “ಎಲ್ಲಾ ಪಕ್ಷದ ಶಾಸಕರು ಈ ವಿಚಾರವಾಗಿ ವಿಸ್ತೃತ ಚರ್ಚೆಯಾಗಬೇಕು ಎಂದು ತಿಳಿಸಿದರು. ಇದಕ್ಕೆ ನಾನು ಮುಕ್ತವಾಗಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರ ಅಭಿಪ್ರಾಯವನ್ನು ಕೇಳಬೇಕು. ಇದರಲ್ಲಿ ಯಾವುದೇ ತಪ್ಪು ಆಗಬಾರದು. ಸಂವಿಧಾನದ 73 ಹಾಗೂ 74ನೇ ತಿದ್ದುಪಡಿ ಗಮನದಲ್ಲಿಟ್ಟುಕೊಂಡು ಇದನ್ನು ಮಾಡಬೇಕು. ಬೆಂಗಳೂರಿಗೆ ಪರಿಣಾಮಕಾರಿ ಆಡಳಿತ ನೀಡಬೇಕು. ಇದಕ್ಕೆ ಸಂಬಂಧಿಸಿದಂತೆ ಇಂದು ಎಲ್ಲಾ ಪಕ್ಷಗಳ ಶಾಸಕರ ಸಭೆ ಕರೆಯಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸದನ ಸಮಿತಿಯನ್ನು ಸದ್ಯದಲ್ಲೇ ರಚಿಸಲಾಗುವುದು. ವಿರೋಧ ಪಕ್ಷಗಳ ಸಲಹೆ, ಅಭಿಪ್ರಾಯಗಳನ್ನು ನಾವು ಸ್ವೀಕರಿಸುತ್ತೇವೆ” ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News