ಕುಮಾರಸ್ವಾಮಿ ಅಸೂಯೆಗೆ ಯಾವುದೇ ರೀತಿಯ ಔಷಧವಿಲ್ಲ : ಡಿ.ಕೆ.ಶಿವಕುಮಾರ್

Update: 2024-05-21 13:28 GMT

ಬೆಂಗಳೂರು: ‘ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಸೂಯೆಗೆ ಯಾವುದೇ ರೀತಿಯ ಔಷಧವಿಲ್ಲ. ನಾನು ರಾಜಿನಾಮೇ ಕೊಡಬೇಕು ಎನ್ನುವುದು ಅವರ ಆಸೆ. ಆಸೆ ಪಡುವುದರಲ್ಲಿ ತಪ್ಪೇನು ಇಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಚ್‍ಡಿಕೆಗೆ ಇಂದಿಲ್ಲಿ ತಿರುಗೇಟು ನೀಡಿದ್ದಾರೆ.

ಮಂಗಳವಾರ ನಗರದ ಆನಂದ್ ರಾವ್ ವೃತ್ತದಲ್ಲಿನ ಕಾಂಗ್ರೆಸ್ ಭವನದಲ್ಲಿ ರಾಜೀವ್‍ಗಾಂಧಿ ಪುಣ್ಯಸ್ಮರಣೆ ಪ್ರಯುಕ್ತ ಯುವ ಕಾಂಗ್ರೆಸ್ ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರ ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ನಾನು ಕಿಂಗ್ ಮೇಕರ್ ಆಗುತ್ತೇನೆಂದುಕೊಂಡಿದ್ದರು. ಆದರೆ ಅವರ ಅಧ್ಯಕ್ಷತೆಯಲ್ಲಿ ಕೇವಲ 18 ಸ್ಥಾನಗಳು ಬಂದವು. ನನ್ನ ಅಧ್ಯಕ್ಷತೆಯಲ್ಲಿ 136 ಸ್ಥಾನ ಬಂದಿರುವುದಕ್ಕೆ ಅವರಿಗೆ ಅಸೂಯೆ ಎಂದು ಟೀಕಿಸಿದರು.

ಜೆಡಿಎಸ್‍ನವರು ತಮ್ಮ ಶಕ್ತಿ ಕಳೆದುಕೊಂಡಿದ್ದೇವೆಂದು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಅವರು ಏನು ಬೇಕಾದರೂ ಮಾತನಾಡಲಿ ಎಂದರು. ಇದೇ ವೇಳೆ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ ಕಾರ್ಯಕರ್ತರಿಗೆ ಪ್ರಮಾಣ ಪತ್ರ ನೀಡಿ, ರಕ್ತದಾನ ಮಾಡುವುದರಿಂದ ನಮ್ಮ ದೈಹಿಕ ಆರೋಗ್ಯ ಸುಧಾರಿಸುವುದರ ಜೊತೆಗೆ ಒಂದು ಅಮೂಲ್ಯ ಜೀವ ಉಳಿಸಿದ ಸಾರ್ಥಕತೆ ಸಿಗಲಿದೆ ಎಂದು ಶಿವಕುಮಾರ್ ರಕ್ತದಾನ ಮಾಡಿದವರಿಗೆ ಶುಭ ಕೋರಿದರು. ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥಗೌಡ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News