ಗುತ್ತಿಗೆ ಅವ್ಯವಹಾರದ ತನಿಖಾ ವರದಿ | ಕ್ರಮದ ಬಗ್ಗೆ ಸಿಎಂ, ಸಂಪುಟ ನಿರ್ಧಾರ : ಲಕ್ಷ್ಮೀ ಹೆಬ್ಬಾಳ್ಕರ್‌

Update: 2025-03-13 15:06 IST
ಗುತ್ತಿಗೆ ಅವ್ಯವಹಾರದ ತನಿಖಾ ವರದಿ | ಕ್ರಮದ ಬಗ್ಗೆ ಸಿಎಂ, ಸಂಪುಟ ನಿರ್ಧಾರ : ಲಕ್ಷ್ಮೀ ಹೆಬ್ಬಾಳ್ಕರ್‌
  • whatsapp icon

ಬೆಂಗಳೂರು : ಗುತ್ತಿಗೆ ಅವ್ಯವಹಾರದ ತನಿಖಾ ವರದಿ ಸಲ್ಲಿಕೆ ಆಗಿದ್ದು, ವರದಿಯಾನುಸಾರ ಮುಂದೆ ಕ್ರಮ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿಯವರು ಹಾಗೂ ಸಚಿವ ಸಂಪುಟ ನಿರ್ಧರಿಸಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಂತಹ ಹಗರಣಗಳು ಒಂದೆರಡಲ್ಲ, ಅದರಲ್ಲೂ ಪಿಎಸ್‌ಐ ನೇಮಕಾತಿ, ಉಪನ್ಯಾಸಕರ ನೇಮಕ, ಕೊರೋನಾ ಉಪಕರಣ ಖರೀದಿ, ಹೀಗೆ ಸಾಕಷ್ಟು ಹಗರಣಗಳು ನಡೆದಿದ್ದು, ಇವೆಲ್ಲದರ ಬಗ್ಗೆ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅವರು ಸಮಗ್ರ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಒಪ್ಪಿಸಿದ್ದಾರೆ. ವರದಿಯು ಸಚಿವ ಸಂಪುಟದ ಮುಂದೆ ಚರ್ಚೆ ಆಗಲಿದೆ. ಮುಖ್ಯಮಂತ್ರಿಯವರು ಮತ್ತು ಸಚಿವ ಸಂಪುಟ ಮುಂದೆ ನಿರ್ಧಾರ ಕೈಗೊಳ್ಳುತ್ತದೆ, ಅದರ ಮೇಲೆ ಕ್ರಮ ಆಗಲಿದೆ ಎಂದು  ಹೇಳಿದರು.

ನಟಿ ರನ್ಯಾ ರಾವ್‌ ಕೇಸ್; ಶಾಮೀಲಾಗಿದ್ದರೆ ಯಾರನ್ನೂ ಬಿಡುವುದಿಲ್ಲ :

ರನ್ಯಾ ರಾವ್‌ ಕೇಸ್ ಸಿಐಡಿ ವಿಚಾರಣೆ ವಾಪಸ್ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಟಿ ರನ್ಯಾ ರಾವ್‌ ಕೇಸಿನ ಬಗ್ಗೆ ಮಾಧ್ಯಮದವರು (ನೀವು) ಏನ್ನೆಲ್ಲ ತೋರಿಸುತ್ತಿದ್ದೀರೋ ಅಷ್ಟೇ ನಮಗೆ ಗೊತ್ತು. ನನ್ನ ಇಲಾಖೆಯಲ್ಲೇನು ಇಂಟೆಲಿಜೆನ್ಸಿ ಇಲ್ಲ. ಮುಖ್ಯಮಂತ್ರಿಯವರು ಮತ್ತು ಗೃಹಮಂತ್ರಿಯವರಿಗೆ ಈ ಪ್ರಕರಣದ ಬಗ್ಗೆ ಸವಿಸ್ತಾರವಾಗಿ ಗೊತ್ತು. ಈ ಪ್ರಕರಣದಲ್ಲಿ ಯಾರೇ ಶಾಮೀಲಾಗಿದ್ದರೂ ಕೂಡ ತನಿಖೆಯಿಂದ ಹೊರಬೀಳುತ್ತದೆ. ನಂತರದಲ್ಲಿ ಏನೆಲ್ಲ ಕ್ರಮ ಎನ್ನುವುದು ನಿರ್ಧಾರವಾಗುತ್ತದೆ ಎಂದರು.

ಮೀಸಲಾತಿ ಕೇಳುವ ಅಧಿಕಾರ ಎಲ್ಲರಿಗೂ ಇದೆ :

ಮುಸ್ಲಿಮರು ಮೀಸಲಾತಿಯನ್ನು ಹೆಚ್ಚಳ ಮಾಡಬೇಕೆಂದು ಬೇಡಿಕೆ ಸಲ್ಲಿಸಿರುವ ಕುರಿತು ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು, ನಾವು ಪಂಚಮಸಾಲಿಗಳು 2ಎ ಕೇಳುತ್ತಿದ್ದೇವೆ. ಬೇರೆಯವರು ಬೇರೆ ಮೀಸಲಾತಿ ಕೇಳುತ್ತಿದ್ಧಾರೆ. ಕೇಳುವಂತಹ ಅಧಿಕಾರ, ಹಕ್ಕು ಎಲ್ಲರಿಗೂ ಇರುತ್ತದೆ ಎಂದು ಸಚಿವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News