ಪಹಲ್ಗಾಮ್ ದಾಳಿ | ಕೇಂದ್ರ ಯಾವುದೇ ಕ್ರಮ ಕೈಗೊಂಡರೂ ಅದಕ್ಕೆ ನಮ್ಮ ಬೆಂಬಲವಿದೆ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ: ಜಮ್ಮು-ಕಾಶ್ಮೀರದ ಪಹಲ್ಗಾಮ್‍ನಲ್ಲಿ ಭಯೋತ್ಪಾದಕ ದಾಳಿಯನ್ನು ನಡೆಸಿದ ಉಗ್ರರನ್ನು ಮಟ್ಟಹಾಕಲು ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಯಾವುದೇ ಕ್ರಮ ಕೈಗೊಂಡರೂ ಅದಕ್ಕೆ ನಮ್ಮ ಬೆಂಬಲವಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕಟಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಗ್ರರ ದಾಳಿಯ ಸಂದರ್ಭದಲ್ಲಿ ಇಡೀ ದೇಶವೇ ಒಕ್ಕೋರಲಿನಿಂದ ದಾಳಿಯನ್ನು ಕಟುಶಬ್ಧಗಳಿಂದ ಖಂಡಿಸಿದೆ. ಯಾವುದೇ ಪಕ್ಷ ಅಥವಾ ಯಾವುದೇ ಸರಕಾರ ಆಡಳಿತದಲ್ಲಿರಲಿ. ಎಲ್ಲರೂ ಒಟ್ಟಾಗಿ ಉಗ್ರರನ್ನು ಮೆಟ್ಟಿ ನಿಲ್ಲಬೇಕಿದೆ ಎಂದು ಹೇಳಿದರು.
ಭದ್ರತಾ ವೈಫಲ್ಯದ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ನಾವೆಲ್ಲರೂ ಭಾರತೀಯರು. ಈ ಸಂದರ್ಭದಲ್ಲಿ ನಾವೆಲ್ಲ ಒಗ್ಗಟ್ಟು ಪ್ರದರ್ಶಿಸಬೇಕಿದೆ. ಉಗ್ರರನ್ನು ಮಟ್ಟಹಾಕುವ ವಿಷಯದಲ್ಲಿ ಕೇಂದ್ರ ಸರಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಅವರು ತಿಳಿಸಿದರು.
ನಮ್ಮ ಪಕ್ಷ ಕೈಗೊಂಡಿರುವ ನಿಲುವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾವೆಲ್ಲರೂ ಕೇಂದ್ರ ಸರಕಾರದ ಜೊತೆ ನಿಲ್ಲುತ್ತೇವೆ. ಪಹಲ್ಗಾಮ್ ದಾಳಿಯನ್ನು ಎಲ್ಲರೂ ಖಂಡಿಸಿದ್ದು, ಇಂತಹ ಕೃತ್ಯಗಳು ಸಂಭವಿಸಬಾರದು. ಹೀಗಾಗಿ ಉಗ್ರರನ್ನು ಮಟ್ಟ ಹಾಕುವುದೇ ನಮ್ಮೆಲ್ಲರ ಉದ್ದೇಶ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಅಮಾಯಕರಿಗೆ ವಂಚಿಸುತ್ತಿರುವವರ ಬಗ್ಗೆ ನನ್ನ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಖುದ್ದು ನಾನೇ ದೂರು ನೀಡಿದ್ದೇನೆ ಎಂದ ಅವರು, ಇಲಾಖೆಯಲ್ಲಿ ಇಂತಹ ಘಟನೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.