ಪೊಲೀಸ್ ಠಾಣೆಗೆ ನುಗ್ಗಿದ ಚಿರತೆ; ಪೊಲೀಸ್ ಸಿಬ್ಬಂದಿಯ ಪ್ರತಿಕ್ರಿಯೆ ವೈರಲ್!

Screengrab:X/@supriyasahuias
ನೀಲ್‌ಗಿರೀಸ್ (ತಮಿಳುನಾಡು): ಚಿರತೆಯೊಂದು ಅನಿರೀಕ್ಷಿತವಾಗಿ ಪೊಲೀಸ್ ಠಾಣೆಯೊಳಗೆ ಹೊಕ್ಕು, ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯೊಬ್ಬರನ್ನು ಗಾಬರಿಗೊಳಿಸಿರುವ ಘಟನೆ ತಮಿಳುನಾಡಿನ ನೀಲ್‌ಗಿರೀಸ್ ಜಿಲ್ಲೆಯ ನಡುವಟ್ಟಂನಲ್ಲಿ ನಡೆದಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಚಿರತೆಯೊಂದು ಪೊಲೀಸ್ ಠಾಣೆ ಕಟ್ಟಡದ ಎಲ್ಲ ಕೋಣೆಗಳನ್ನು ತಪಾಸಣೆ ಮಾಡುವಂತೆ ಒಂದರ ನಂತರ ಮತ್ತೊಂದು ಕೋಣೆಯೊಳಗೆ ಅಡ್ಡಾಡುತ್ತಾ, ಕೊನೆಗೆ ಪೊಲೀಸ್ ಠಾಣೆಯಿಂದ ಹೊರ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.
ಚಿರತೆ ಮೊದಲ ಕೋಣೆಯಿಂದ ಹೊರ ಬಂದ ನಂತರ, ಅದರ ಹಿಂದಿನಿಂದ ಬಂದ ಪೊಲೀಸ್ ಸಿಬ್ಬಂದಿ ಇಣುಕಿ ನೋಡುತ್ತಿರುವುದು ಈ ವೈರಲ್ ವಿಡಿಯೊದಲ್ಲಿ ಸೆರೆಯಾಗಿದೆ. ನಂತರ ಅವರು ಕೋಣೆಯ ಬಾಗಿಲು ಹಾಕಿಕೊಳ್ಳಲು ಪ್ರಯತ್ನಿಸಿದ್ದಾರೆ. ಗಾಬರಿಯಲ್ಲಿ ಅವರು ಹಲವು ಬಾರಿ ಬಾಗಿಲಿನ ಚಿಲಕ ಹಾಕಲು ವಿಫಲವಾದದ್ದೂ ವೈರಲ್ ಆದ ವಿಡಿಯೋದಲ್ಲಿ ಕಂಡು ಬಂದಿದೆ.
ಚಿರತೆ ಠಾಣೆಯೊಳಗೆ ಬಂದಾಗ, ಪೊಲೀಸ್ ಸಿಬ್ಬಂದಿ ತೋರಿರುವ ಸಂಯಮದ ವರ್ತನೆಯನ್ನು ಶ್ಲಾಘಿಸಿರುವ ತಮಿಳುನಾಡು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಾಹು, ಪೊಲೀಸ್ ಠಾಣೆಗೆ ಭೇಟಿ ನೀಡಿದ ಚಿರತೆಯ ಉದ್ದೇಶವೇನಾಗಿತ್ತು ಎಂದು ತಮಾಷೆಯನ್ನೂ ಮಾಡಿದ್ದಾರೆ.