ಲೋಕ ಅದಾಲತ್; 25 ಲಕ್ಷ ಪ್ರಕರಣ ಇತ್ಯರ್ಥ
ಬೆಂಗಳೂರು: ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲಿ ಡಿ.9ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಒಟ್ಟು 25.14 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ(ಕೆಎಸ್‍ಎಲ್‍ಎಸ್‍ಎ) ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ಪಿ.ಎಸ್.ದಿನೇಶ್‍ಕುಮಾರ್, ಈ ಕುರಿತಂತೆ ವಿವರ ನೀಡಿದರು.
ರಾಜ್ಯಾದ್ಯಂತ ವಿವಿಧ ಪೀಠಗಳು ಅದಾಲತ್ ನಡೆಸಿ ಹೈಕೋರ್ಟ್ ಹಾಗೂ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಒಟ್ಟು 2.24 ಲಕ್ಷ ಹಾಗೂ 22.90 ಲಕ್ಷ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಸಾರ್ವಜನಿಕರಿಗೆ 1,569 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ ಎಂದು ತಿಳಿಸಿದರು.
1,358 ವೈವಾಹಿಕ ಪ್ರಕರಣಗಳು ಇತ್ಯರ್ಥಗೊಂಡಿವೆ. ಸಂಧಾನದ ಮೂಲಕ 262 ದಂಪತಿಗಳನ್ನ ಒಟ್ಟುಗೂಡಿಸಲಾಗಿದೆ. 3,125 ವಿಭಾಗ ದಾವೆ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗಿದೆ ಎಂದು ದಿನೇಶ್ ಕುಮಾರ್ ತಿಳಿಸಿದರು.
4031 ಅಪಘಾತ ಪ್ರಕರಣಗಳಲ್ಲಿ 209 ಕೋಟಿ ಪರಿಹಾರ ನೀಡಲಾಗಿದೆ. 10513 ಚೆಕ್ ಬೌನ್ಸ್ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. 28 ರೇರಾ, 88 ಗ್ರಾಹಕರ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ನ್ಯಾ.ದಿನೇಶ್ ಕುಮಾರ್ ಹೇಳಿದ್ದಾರೆ.