14 ಲೋಕಸಭಾ ಕ್ಷೇತ್ರಗಳಿಗೆ ಮೇ 7ಕ್ಕೆ ಮತದಾನ : ಬಹಿರಂಗ ಪ್ರಚಾರಕ್ಕೆ ನಾಳೆ(ಮೇ 5) ಸಂಜೆ 6ಗಂಟೆಗೆ ತೆರೆ

Update: 2024-05-04 14:34 GMT

ಬೆಂಗಳೂರು : ಎರಡನೇ ಹಂತದ 14 ಲೋಕಸಭಾ ಕ್ಷೇತ್ರಗಳ ಬಹಿರಂಗ ಪ್ರಚಾರಕ್ಕೆ ನಾಳೆ(ಮೇ 5) ಸಂಜೆ 6ಗಂಟೆಗೆ ತೆರೆ ಬೀಳಲಿದ್ದು, ಮತದಾರರ ಮನ ಗೆಲ್ಲಲ್ಲು ರಾಜಕೀಯ ಪಕ್ಷಗಳ ಮುಖಂಡರು, ಘಟಾನುಘಟಿ ಅಭ್ಯರ್ಥಿಗಳು ಕೊನೆಯ ಕ್ಷಣದಲ್ಲಿ ಕಸರತ್ತು ನಡೆಸುತ್ತಿದ್ದಾರೆ.

ಮೇ 7ರ ಬೆಳಗ್ಗೆ 7ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ಮತದಾನ ನಡೆಯಲಿದ್ದು, ಮತದಾನಕ್ಕೆ 48 ಗಂಟೆ ಮೊದಲು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ನಾಳೆ ಸಂಜೆ 6ಗಂಟೆಯ ನಂತರ ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಪಕ್ಷಗಳ ಕಾರ್ಯಕರ್ತರು ಕ್ಷೇತ್ರ ಬಿಟ್ಟು ತೆರಳಲು ಚುನಾವಣಾ ಆಯೋಗ ಸೂಚನೆ ನೀಡಿದೆ.

ರಾಜ್ಯದಲ್ಲಿ ಗಮನ ಸೆಳೆದಿರುವ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ(ಎಸ್ಸಿ ಮೀಸಲು), ಕಲಬುರಗಿ(ಎಸ್ಸಿ), ರಾಯಚೂರು(ಎಸ್ಟಿ ಮೀಸಲು), ಬೀದರ್, ಕೊಪ್ಪಳ, ಬಳ್ಳಾರಿ(ಎಸ್ಟಿ), ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಮೇಲ್ಕಂಡ 14 ಕ್ಷೇತ್ರಗಳಲ್ಲಿಯೂ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಆಯೋಗ ಸಲಕ ಸಿದ್ಧತೆ ಮಾಡಿಕೊಂಡಿದೆ. ನಾಳೆ ಸಂಜೆ ಸಂಜೆ 6 ಗಂಟೆಯಿಂದ ಚುನಾವಣೆ ನಡೆಯಲಿರುವ 48 ಗಂಟೆಗಳ ಅವಧಿ ‘ನಿಶ್ಯಬ್ದದ ಅವಧಿ’ಯಾಗಿದ್ದು, ಬಹಿರಂಗ ಪ್ರಚಾರ, ಸುದ್ದಿಗೋಷ್ಠಿ ನಡೆಸುವಂತಿಲ್ಲ ಎಂದು ಆಯೋಗ ನಿರ್ದೇಶನ ನೀಡಿದೆ. ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೂ ಮೇಲ್ಕಂಡ ನಿಯಮವೇ ಅನ್ವಯವಾಗಲಿದೆ.

227 ಮಂದಿ ಅಖಾಡದಲ್ಲಿ: ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳಲ್ಲಿ 21ಮಂದಿ ಮಹಿಳೆಯರು, 206ಮಂದಿ ಪುರುಷರು ಸೇರಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿಯ ಒಟ್ಟು 227ಮಂದಿ ಘಟಾನುಘಟಿ ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ. ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಆ ಪಕ್ಷದ ಅಭ್ಯರ್ಥಿಗಳು ಅಖಾಡದಲ್ಲಿ ಇಲ್ಲ.

2.59 ಕೋಟಿ ಮತದಾರರು: 14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 2,59,52,958 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಆ ಪೈಕಿ 1,29,67,607-ಮಹಿಳೆಯರು, 1,29,83,406-ಪುರುಷ, 35,465 ಸೇವಾ ಮತದಾರರಿದ್ದಾರೆ. ಯುವ ಮತದಾರರು 6,90,929 ಇದ್ದು, 85 ವರ್ಷ ಮೇಲ್ಪಟ್ಟ 2,29,563 ಮತದಾರರಿದ್ದರೆ, 3,43,966 ವಿಲಕಚೇತನ ಮತದಾರರಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ ಸ್ಪರ್ಧಿಸಿರುವ ಕಲಬುರಗಿ ಕ್ಷೇತ್ರದಲ್ಲಿ ಅತೀ ಹೆಚ್ಚು 20,98,202 ಮತದಾರರಿದ್ದರೆ, ಉತ್ತರ ಕನ್ನಡ ಕ್ಷೇತ್ರದಲ್ಲಿ 16,41,156 ಮತದಾರರಿದ್ದಾರೆ ಎಂದು ಆಯೋಗ ತಿಳಿಸಿದೆ.

28,269 ಮತಗಟ್ಟೆಗಳ ಸ್ಥಾಪನೆ: ಮೇಲ್ಕಂಡ 14 ಲೋಕಸಭಾ ಕ್ಷೇತ್ರಗಳಲ್ಲಿ 12 ಉಪ ಮತಗಟ್ಟೆಗಳು ಸೇರಿದಂತೆ ಒಟ್ಟು 28,269 ಮತಗಟ್ಟೆಗಳನ್ನು ತೆರೆಯಲಾಗುತ್ತದೆ. ಅತ್ಯಂತ ಹೆಚ್ಚು ರಾಯಚೂರು ಕ್ಷೇತ್ರದಲ್ಲಿ 2,203, ಅದೇ ರೀತಿಯಲ್ಲಿ ಕಲಬುರಗಿ ಕ್ಷೇತ್ರದಲ್ಲಿ 2,166 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಆಯೋಗ ಹೇಳಿದೆ.

ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ: ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕಲಾಗುತ್ತದೆ. ಮತದಾರರಿಗೆ ಈಗಾಗಲೇ ಆಯೋಗದಿಂದ ನೀಡಿರುವ ಓಟರ್ ಸ್ಲಿಪ್ ಹಾಗೂ ಮತದಾರರ ಗುರುತಿನ ಚೀಟಿಯನ್ನು ಹಾಜರುಪಡಿಸಿ ಮತದಾನ ಮಾಡಬಹುದು. ಗುರುತಿನ ಚೀಟಿ ಇಲ್ಲದ, ಮತದಾರರ ಪಟ್ಟಿಯಲ್ಲಿ ಹೆಸರಿರುವ ಮತದಾರರು ಆಧಾರ್, ಎನ್‍ಆರ್ ಇಜಿ ಜಾಬ್ ಕಾರ್ಡ್, ಭಾವಚಿತ್ರ ಇರುವ ಬ್ಯಾಂಕ್, ಅಂಚೆ ಕಚೇರಿ ಪಾಸ್‍ಬುಕ್ ಸಹಿತ ಇತರೆ ಪರ್ಯಾಯ ದಾಖಲೆಗಳನ್ನು ತೋರಿಸಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.

ಬಿಸಿಲಿನಿಂದ ರಕ್ಷಣೆಗೆ ವ್ಯವಸ್ಥೆ: ಬೇಸಿಗೆ ಬಿಸಿಲು ಹೆಚ್ಚಾಗಿರುವ ಕಾರಣ ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಮತಗಟ್ಟೆ ಅಕ್ಕಪಕ್ಕದ ಕೊಠಡಿಗಳಲ್ಲಿ ವಿಶ್ರಾಂತಿ ಕೊಠಡಿಗಳನ್ನು ಸ್ಥಾಪಿಸಬೇಕು. ಮತಗಟ್ಟೆ ಆವರಣದಲ್ಲಿ ಶಾಮಿಯಾನ, ಫ್ಯಾನ್ ಮತ್ತು ಆಸನ ವ್ಯವಸ್ಥೆ ಸೇರಿದಂತೆ ಬಿಸಿಲಿನಿಂದ ರಕ್ಷಣೆಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗಿದೆ ಎಂದು ಆಯೋಗ ತಿಳಿಸಿದೆ.

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು

ಚಿಕ್ಕೋಡಿ: ಪ್ರಿಯಾಂಕಾ ಜಾರಕಿಹೊಳಿ(ಕಾಂಗ್ರೆಸ್), ಅಣ್ಣಾ ಸಾಹೇಬ್ ಜೊಲ್ಲೆ(ಬಿಜೆಪಿ)

ಬೆಳಗಾವಿ: ಮೃಣಾಳ್ ಹೆಬ್ಬಾಳ್ಕರ್(ಕಾಂಗ್ರೆಸ್), ಜಗದೀಶ್ ಶೆಟ್ಟರ್(ಬಿಜೆಪಿ)

ಬಾಗಲಕೋಟೆ: ಸಂಯುಕ್ತಾ ಪಾಟೀಲ್(ಕಾಂಗ್ರೆಸ್), ಪಿ.ಸಿ.ಗದ್ದೀಗೌಡರ್(ಬಿಜೆಪಿ)

ಬಿಜಾಪುರ(ಎಸ್ಸಿ): ರಾಜು ಅಲಗೂರ್(ಕಾಂಗ್ರೆಸ್), ರಮೇಶ್ ಜಿಗಜಿಣಗಿ(ಬಿಜೆಪಿ)

ಗುಲ್ಬರ್ಗ(ಎಸ್ಸಿ): ಡಾ.ಉಮೇಶ್ ಜಾಧವ್(ಬಿಜೆಪಿ), ರಾಧಾಕೃಷ್ಣ ದೊಡ್ಡಮನಿ(ಕಾಂಗ್ರೆಸ್)

ರಾಯಚೂರು(ಎಸ್ಟಿ): ರಾಜಾ ಅಮರೇಶ್ವರ ನಾಯಕ್(ಬಿಜೆಪಿ), ಜಿ.ಕುಮಾರ್ ನಾಯಕ್(ಕಾಂಗ್ರೆಸ್)

ಬೀದರ್: ಭಗವಂತ ಖೂಬಾ(ಬಿಜೆಪಿ), ಸಾಗರ್ ಖಂಡ್ರೆ(ಕಾಂಗ್ರೆಸ್)

ಕೊಪ್ಪಳ: ಕೆ.ರಾಜಶೇಖರ ಹಿಟ್ನಾಳ್(ಕಾಂಗ್ರೆಸ್), ಡಾ.ಬಸವರಾಜ್(ಬಿಜೆಪಿ)

ಬಳ್ಳಾರಿ(ಎಸ್ಟಿ): ಬಿ.ಶ್ರೀರಾಮುಲು(ಬಿಜೆಪಿ), ಈ.ತುಕಾರಾಂ(ಕಾಂಗ್ರೆಸ್)

ಹಾವೇರಿ: ಬಸವರಾಜ ಬೊಮ್ಮಾಯಿ(ಬಿಜೆಪಿ), ಆನಂದಸ್ವಾಮಿ ಗಡ್ಡದೇವರಮಠ(ಕಾಂಗ್ರೆಸ್)

ಧಾರವಾಡ: ವಿನೋದ್ ಅಸೂಟಿ(ಕಾಂಗ್ರೆಸ್), ಪ್ರಹ್ಲಾದ್ ಜೋಶಿ(ಬಿಜೆಪಿ)

ಉತ್ತರಕನ್ನಡ: ಡಾ.ಅಂಜಲಿ ನಿಂಬಾಳ್ಕರ್(ಕಾಂಗ್ರೆಸ್), ವಿಶ್ವೇಶ್ವರ ಹೆಗಡೆ ಕಾಗೇರಿ(ಬಿಜೆಪಿ)

ದಾವಣಗೆರೆ: ಡಾ.ಪ್ರಭಾ ಮಲ್ಲಿಕಾರ್ಜುನ್(ಕಾಂಗ್ರೆಸ್), ಗಾಯತ್ರಿ ಸಿದ್ದೇಶ್ವರ್(ಬಿಜೆಪಿ), ಜಿ.ಬಿ.ವಿನಯ್ ಕುಮಾರ್ (ಕಾಂಗ್ರೆಸ್ ಬಂಡಾಯ)

ಶಿವಮೊಗ್ಗ: ಬಿ.ವೈ.ರಾಘವೇಂದ್ರ(ಬಿಜೆಪಿ), ಗೀತಾ ಶಿವರಾಜ್‍ಕುಮಾರ್(ಕಾಂಗ್ರೆಸ್), ಕೆ.ಎಸ್.ಈಶ್ವರಪ್ಪ (ಬಿಜೆಪಿ ಬಂಡಾಯ).

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News