ಬಿಜೆಪಿ, ಜೆಡಿಎಸ್ ನಡುವಿನ ಲೋಕಸಭಾ ಸೀಟು ಹಂಚಿಕೆ ಒಂದು ವಾರದಲ್ಲಿ ಅಂತಿಮ: ಎಚ್.ಡಿ.ದೇವೇಗೌಡ

Update: 2024-03-04 13:11 GMT

ಬೆಂಗಳೂರು: ಜೆಡಿಎಸ್ ಮತ್ತು ಬಿಜೆಪಿ ನಡುವೆ ಲೋಕಸಭಾ ಕ್ಷೇತ್ರಗಳ ಹಂಚಿಕೆ ಅಂತಿಮ ಹಂತದಲ್ಲಿದ್ದು, ಒಂದು ವಾರದೊಳಗೆ ಎಲ್ಲ ಪ್ರಕ್ರಿಯೆ ನಡೆಯುತ್ತದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್‍ನ ಮಹಿಳಾ ಘಟಕದ ಅಧ್ಯಕ್ಷೆಯಾಗಿ ರಶ್ಮಿ ರಾಮೇಗೌಡ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಸೀಟು ಹಂಚಿಕೆ ವಿಚಾರದ ಬಗ್ಗೆ ಈಗಾಗಲೇ ಬಿಜೆಪಿ ನಾಯಕರ ಜತೆ ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ. ಇನ್ನೊಮ್ಮೆ ಕೂತು ಚರ್ಚೆ ಮಾಡಿದರೆ ಅಲ್ಲಿಗೆ ಎಲ್ಲವು ಅಂತಿಮ ಆಗುತ್ತದೆ ಎಂದು ವಿವರಣೆ ನೀಡಿದರು.

ಮೋದಿ, ಶಾ ತೀರ್ಮಾನ: ಇನ್ನೊಂದು ವಾರದಲ್ಲಿ ಸೀಟು ಹಂಚಿಕೆ ಬಗ್ಗೆ ತೀರ್ಮಾನ ಆಗುತ್ತದೆ. ಜೆಡಿಎಸ್ ಪಕ್ಷಕ್ಕೆ ಯಾವ ಯಾವ ಕ್ಷೇತ್ರ ಎನ್ನುವುದು ಮೋದಿ, ಅಮಿತ್ ಶಾ, ನಡ್ಡಾ, ಎಚ್‍ಡಿಕೆ ಅವರು ಸಮಾಲೋಚನೆ ಮಾಡುತ್ತಾರೆ. ಅಲ್ಲಿ ಅವರು ಸ್ಪರ್ಧೆ ಮಾಡಬೇಕಾ? ಬೇಡವಾ? ಎನ್ನುವ ಅಂಶವನ್ನು ಚರ್ಚೆ ಮಾಡಿ ನಿರ್ಧಾರ ಮಾಡುತ್ತಾರೆ ಎಂದು ದೇವೇಗೌಡ ತಿಳಿಸಿದರು.

ಬಿಜೆಪಿ ಟಿಕೆಟ್ ವಿಚಾರವಾಗಿ ಕೆಲವು ಕ್ಷೇತ್ರಗಳ ಅಭಿಪ್ರಾಯ ಕೇಳಬಹುದು. ಆಗ ನಾವು ನಮ್ಮ ಅಭಿಪ್ರಾಯವನ್ನು ಹೇಳುತ್ತೇವೆ. ಮೈತ್ರಿ ಧರ್ಮವನ್ನು ನಾವು ಪಾಲಿಸುತ್ತೇವೆ. ಎಲ್ಲ ಕ್ಷೇತ್ರಗಳನ್ನು ಗೆಲ್ಲುವುದಕ್ಕೆ ಬಿಜೆಪಿ ಜತೆ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದು ದೇವೇಗೌಡ ಸ್ಪಷ್ಟಣೆ ನೀಡಿದರು.

ಲೋಕಸಭಾ ಚುನಾವಣೆ ಅಧಿಸೂಚನೆ ಬಳಿಕ ರಾಜ್ಯದಲ್ಲಿ ನನ್ನ ಪ್ರವಾಸದ ಬಗ್ಗೆ ನಿರ್ಧಾರ ಮಾಡಲಾಗುವುದು. 10 ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ಅವರು ಪ್ರವಾಸ ಮಾಡುತ್ತಿದ್ದಾರೆ. ಆದರೆ, ನಾನು ಎಲ್ಲಿಗೆ ಕರೆದರೆ ಅಲ್ಲಿಗೆ ಹೋಗುತ್ತೇನೆ. ಯಾವ ಜಿಲ್ಲೆಗೆ ಕರೆದರೂ ಹೋಗುತ್ತೇನೆ. ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರು ಎಲ್ಲರೂ ಪ್ರವಾಸ ಮಾಡುತ್ತಾರೆಂದು ದೇವೇಗೌಡ ತಿಳಿಸಿದರು.

ಮಾಧ್ಯಮಗಳಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರದ ಅನಗತ್ಯವಾಗಿ ಚರ್ಚೆ ಆಗುತ್ತಿದೆ. ಆ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಿದೆ. ಸಂಘಟನೆಯೂ ಚೆನ್ನಾಗಿದೆ. ಆದಷ್ಟು ಬೇಗ ಮಂಡ್ಯದಲ್ಲಿ ಸಮಾವೇಶ ನಡೆಸಲಾಗುವುದು. ನನಗೆ ವಯಸ್ಸಾಗಿದ್ದರೂ ನಾನೇನು ಸುಮ್ಮನೆ ಕೂರಲ್ಲ ಎಂದು ದೇವೇಗೌಡ ಹೇಳಿದರು.

ಸ್ಪೋಟ ಪ್ರಕರಣ: ‘ಸ್ಪೋಟ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸೂಕ್ಷ್ಮವಾಗಿ ನಿಭಾಯಿಸುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಅವರಿಬ್ಬರ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ. ಸರಕಾರ ಈ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸುತ್ತಿದೆ ಅನಿಸುತ್ತಿದೆ’

ಎಚ್.ಡಿ.ದೇವೇಗೌಡ ಜೆಡಿಎಸ್ ವರಿಷ್ಠ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News