ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ

Update: 2024-12-10 06:05 GMT

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪ ಸಂಬಂಧ ಬೆಸ್ಕಾಂ, ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಮಂಗಳವಾರ ಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ರಾಯಚೂರು, ಗದಗ, ಕೊಪ್ಪಳ, ಚಿತ್ರದುರ್ಗದಲ್ಲಿ ದಾಳಿ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಸಂತಪುರ ವಾರ್ಡ್ ಸಂಖ್ಯೆ 197ರ ಕಂದಾಯ ನಿರೀಕ್ಷಕ ಸುರೇಶ್ ಬಾಬು, ಬಿಬಿಎಂಪಿಯ ಯಲಹಂಕ ವಲಯದ ತೆರಿಗೆ ನಿರೀಕ್ಷಕ ಕೃಷ್ಣಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ ಎಂ.ಸಿ.ಸುನೀಲ್ ಕುಮಾರ್ ಅವರ ಮನೆ ಮೇಲೆ ದಾಳಿ ನಡೆದಿದೆ.

ಅದೇರೀತಿ ಬೆಂಗಳೂರಿನ ಈಸ್ಟ್ ಸರ್ಕಲ್ ಬೆಸ್ಕಾಂನ ಸೂಪರಿಂಟೆಂಡೆಂಟ್ ಇಂಜಿನಿಯರ್ (ಇಲೆಕ್ಟ್ರಿಕಲ್) ಲೋಕೇಶ್ ಬಾಬು, ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತ ಆರ್.ಪಿ. ಜಾಧವ ಅವರ ಮನೆ, ಫಾರ್ಮ್ ಹೌಸ್ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ಕೊಪ್ಪಳದಲ್ಲಿ ಅಬಕಾರಿ ನಿರೀಕ್ಷಕ ರಮೇಶ ಅಗಡಿಯವರ ಮನೆ ಮೇಲೂ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News