ಸಚಿವ ರಾಮಲಿಂಗಾರೆಡ್ಡಿ ಸಂಧಾನ ಸಭೆ ಯಶಸ್ವಿ: ಲಾರಿ ಮಾಲಕರ ಮುಷ್ಕರ ವಾಪಸ್
ಸಾಂದರ್ಭಿಕ ಚಿತ್ರ
ಬೆಂಗಳೂರು: ಡಿಸೇಲ್ ದರ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಲಾರಿ ಮಾಲಕರ ಸಂಘವು ಮೂರು ದಿನಗಳಿಂದ ಕೈಗೊಂಡಿದ್ದ ಮುಷ್ಕರವನ್ನು ಗುರುವಾರ ಹಿಂಪಡೆದಿದೆ.
ಲಾರಿ ಮಾಲಕರ ಬೇಡಿಕೆ ಈಡೇರಿಸುವ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಡೆಸಿದ ಮೂರನೇ ಸಂಧಾನ ಸಭೆ ಯಶಸ್ವಿಯಾಗಿದ್ದು, ಬಹುತೇಕ ಬೇಡಿಕೆಗಳನ್ನು ಈಡೇರಿಸುವುದಾಗಿ ಸಚಿವರು ಭರವಸೆ ನೀಡಿದ ಹಿನ್ನೆಲೆಯಲ್ಲಿ, ಈ ಕೂಡಲೇ ಮುಷ್ಕರವನ್ನು ಕೈಬಿಡುತ್ತಿರುವುದಾಗಿ ಸಂಘದ ರಾಜ್ಯಾಧಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ರೀತಿಯ ಲಾರಿಗಳನ್ನು ಗಡಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಆರ್‍ಟಿಒ ಅಧಿಕಾರಿಗಳಿಂದ ಪರಿಶೀಲಿಸುವ ಕೆಲಸವಾಗುತ್ತಿತ್ತು. ಅನ್ಯ ರಾಜ್ಯಗಳಲ್ಲಿ ಬಾರ್ಡರ್ ಪೋಸ್ಟ್ ಇರಲಿಲ್ಲ. ಇದನ್ನು ತೆರವು ಮಾಡಬೇಕೆಂದು ಹೇಳಿದ್ದೆವು. ಮೂರು ತಿಂಗಳಲ್ಲಿ ಹಂತ-ಹಂತವಾಗಿ ತೆರವು ಮಾಡುವುದಾಗಿ ಸರಕಾರ ಭರವಸೆ ನೀಡಿದೆ ಎಂದು ಷಣ್ಮುಗಪ್ಪ ಹೇಳಿದ್ದಾರೆ.
ಹಳೆಯ ವಾಹನಗಳಿಗೆ ಎಫ್‍ಸಿ ಶುಲ್ಕ ತಕ್ಷಣದಿಂದ ಕಟ್ಟದಂತೆ, ಕಾಲ ಕಾಲಕ್ಕೆ ಅನುಗುಣವಾಗಿ ಲಾರಿ ಬಾಡಿಗೆ ದರ ಹೆಚ್ಚಿಸುವುದಾಗಿ 2023ರಲ್ಲಿ ಸರಕಾರವು ನಿರ್ಣಯ ಕೈಗೊಂಡಿತ್ತು. ಆದರೆ ಅನುಷ್ಠಾನಕ್ಕೆ ತಂದಿರಲಿಲ್ಲ. ಈ ಬಗ್ಗೆ ಇನ್ನೊಂದು ತಿಂಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಲಿಖಿತ ಭರವಸೆ ನೀಡಿದೆ. ಹೀಗಾಗಿ ಲಾರಿ ಮುಷ್ಕರ ಹಿಂಪಡೆಯಲಾಗಿದೆ ಎಂದು ಷಣ್ಮುಗಪ್ಪ ತಿಳಿಸಿದ್ದಾರೆ.