ಸರ್ವಪಕ್ಷಗಳ ಸಭೆಗೆ ಗೈರು | ಪ್ರಧಾನಿ ಮೋದಿಯ ಈ ವರ್ತನೆ ಸರಿಯಿಲ್ಲ : ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ | PC : PTI
ಬೆಂಗಳೂರು : ಜಮ್ಮು-ಕಾಶ್ಮೀರದ ಪೆಹಲ್ಗಾಮ್ ದಾಳಿ ವಿಚಾರವಾಗಿ ಸರ್ವಪಕ್ಷ ಸಭೆಗೆ ಹಾಜರಾಗದೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚುನಾವಣಾ ಭಾಷಣ ಮಾಡಲು ಬಿಹಾರಕ್ಕೆ ಹೋಗುತ್ತಾರೆ. ಅವರ ಈ ವರ್ತನೆ(ಆಟಿಟ್ಯೂಡ್) ಸರಿಯಿಲ್ಲ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಶನಿವಾರ ನಗರದ ಕೆ.ಜೆ.ಹಳ್ಳಿಯ ಅಂಬೇಡ್ಕರ್ ವೈದ್ಯಕೀಯ ಕಾಲೇಜು ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆಹಲ್ಗಾಮ್ ದಾಳಿ ವಿಚಾರವಾಗಿ ಪ್ರಧಾನಮಂತ್ರಿಗಳು ಸರ್ವಪಕ್ಷಗಳ ಸಭೆ ಕರೆದಿದ್ದರು. ಲೋಕಸಭೆ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರೆಲ್ಲರೂ ಭಾಗಿಯಾಗಿದ್ದೆವು. ಸರಕಾರದ ವತಿಯಿಂದ ಪ್ರಧಾನಮಂತ್ರಿ ಹಾಜರಿರಬೇಕಿತ್ತು. ಆದರೆ, ಅವರ ಹಾಜರಾತಿ ಇರಲಿಲ್ಲ. ಪ್ರಧಾನ ಮಂತ್ರಿಗಳ ಈ ವರ್ತನೆ ಸರಿಯಲ್ಲ ಎಂದು ಕಿಡಿಕಾರಿದರು.
ಪೆಹಲ್ಗಾಮ್‍ನಲ್ಲಿ ಉಗ್ರರ ದಾಳಿಗೆ ಸಂಬಂಧಪಟ್ಟಂತೆ ಸರ್ವಪಕ್ಷ ಸಭೆಯಲ್ಲಿ ಎಲ್ಲ ವಿಚಾರಗಳನ್ನು ಪ್ರಧಾನ ಮಂತ್ರಿಗಳೇ ವಿವರಿಸಬೇಕಿತ್ತು, ಆದರೆ, ಅವರು ಬರಲೇ ಇಲ್ಲ. ಅವರು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಬೇರೆ ಕಡೆ ಭಾಷಣ ಮಾಡುವ ಬದಲು ಇಲ್ಲಿ ಬಂದು ಸಮಜಾಯಿಷಿ ಹೇಳಬೇಕಿತ್ತು. ಈ ಘಟನೆಯ ಹೊಣೆ ಯಾರು ಹೊತ್ತಿದ್ದಾರೆ. ಭದ್ರತಾ ವೈಫಲ್ಯವಾಗಿದೆಯೇ, ಇಂಟೆಲಿಜೆನ್ಸ್ ವೈಫಲ್ಯವಾಗಿದೆಯೇ, ಐಬಿ ವೈಫಲ್ಯವಾಗಿದೆಯೇ, ಇನ್ಫಾರ್ಮರ್ಸ್ ವೈಫಲ್ಯವಾಗಿದೆಯೇ, ಪೊಲೀಸರ ವೈಫಲ್ಯವಾಗಿದೆಯೇ?. ತಪ್ಪು ಯಾರದ್ದು ಎನ್ನುವುದು ನಮಗೆ ತಿಳಿಸಬೇಕಿತ್ತು. ಆದರೆ, ಅವರು ಬರಲಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಈಗ ಸ್ವತಃ ಕೇಂದ್ರ ಸರಕಾರವೇ ಭದ್ರತಾ ವೈಫಲ್ಯವಾಗಿದೆ ಎಂದು ಒಪ್ಪಿಕೊಂಡಿದೆ. ಆ ಕಾರಣಕ್ಕಾಗಿ ಸರ್ವ ಪಕ್ಷ ಸಭೆ ಕರೆದಿದ್ದೇವೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಹೀಗಾಗಿ ಘಟನೆಯನ್ನು ಸವಾಲಾಗಿ ತೆಗೆದುಕೊಳ್ಳಬೇಕೆಂದು ನಾವು ಹೇಳಿದ್ದೇವೆ. ಪೆಹಲ್ಗಾಮ್‍ನಲ್ಲಿ ಮೂರು ಹಂತಗಳ ಭದ್ರತಾ ವ್ಯವಸ್ಥೆ ಇದ್ದರೂ ಕೂಡ ಪ್ರವಾಸಿಗರಿಗೆ ರಕ್ಷಣೆ ಕೊಡಲು ಆಗಲಿಲ್ಲ. ಏನೇ ಆದರೂ ಕೂಡ ದೇಶದ ಒಗ್ಗಟ್ಟಿನ ದೃಷ್ಟಿಯಿಂದ ನಾವೆಲ್ಲರೂ ಕೂಡ ಒಂದಾಗಿ ರಕ್ಷಣೆ ಮಾಡೋಣ ಎಂದು ಸಭೆಯಲ್ಲಿ ತಿಳಿಸಿದ್ದೇವೆ. ಇದು ಹುಳುಕು ಹುಡುಕುವ ಸಮಯವಲ್ಲ. ಕೇಂದ್ರ ಸರಕಾರದ ನಿರ್ಣಯಕ್ಕೆ ನಾವು ಬೆಂಬಲ ಸೂಚಿಸುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಈ ಸಂದರ್ಭದಲ್ಲಿ ಯುದ್ಧ ಮಾಡುವ ಅನಿವಾರ್ಯತೆ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಬೇಕೇ ಅಥವಾ ಎಐಸಿಸಿ ಅಧ್ಯಕ್ಷನಾಗಿ ಮಾತನಾಡಬೇಕೆ? ಎಂದು ಪ್ರಶ್ನಿಸಿದರು.