ಮಂಗಳೂರಿನ ಶೈಲೇಶ್‍ಕುಮಾರ್ ಬಂಧನ | ಸೌದಿ ಅರೇಬಿಯಾದಿಂದ ಶಿಕ್ಷೆಯ ಆದೇಶದ ಪ್ರತಿ ಪಡೆದುಕೊಳ್ಳುವಂತೆ ಕೇಂದ್ರಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು, ಆ.9 ಧರ್ಮನಿಂದನೆ ಆರೋಪದಡಿ ಸೌದಿ ಅರೇಬಿಯಾದಲ್ಲಿ ಶಿಕ್ಷೆಗೆ ಗುರಿಯಾಗಿರುವ ಮಂಗಳೂರಿನ ಶೈಲೇಶ್‍ಕುಮಾರ ಗೆ ಶಿಕ್ಷೆ ವಿಧಿಸಿರುವ ಆದೇಶದ ಪ್ರತಿ ಪಡೆದುಕೊಂಡು ನ್ಯಾಯಪೀಠದ ಮುಂದೆ ಹಾಜರುಪಡಿಸುವಂತೆ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ. ಅಷ್ಟೇ ಅಲ್ಲದೆ, ಸೌದಿ ಅರೇಬಿಯಾದಲ್ಲಿ ಶೈಲೇಶ್‍ಕುಮಾರ್ ಗೆ ವಿಧಿಸಿರುವ ಶಿಕ್ಷೆ ಬದಲಾಯಿಸಲು ಕೋರಿ ಅರ್ಜಿ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಿದೆ.
ಸೌದಿ ಅರೇಬಿಯಾದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಶೈಲೇಶ್‍ಕುಮಾರ್ ಪತ್ನಿಯಾದ ಮಂಗಳೂರಿನ ಬಿಕರ್ನಕಟ್ಟೆ ನಿವಾಸಿ ಕವಿತಾ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ, ಈ ಸೂಚನೆ ನೀಡಿ, ವಿಚಾರಣೆಯನ್ನು ಆ.17ಕ್ಕೆ ಮುಂದೂಡಿದೆ.
ಜತೆಗೆ ಧರ್ಮ ನಿಂದನೆ, ದೇಶದ್ರೋಹ ಆರೋಪಗಳನ್ನು ಎದುರಿಸುತ್ತಿರುವ ಪ್ರಕರಣಗಳಲ್ಲಿ ಕ್ಷಮಾಧಾನ ಅರ್ಜಿ ಸಲ್ಲಿಸುವ ಕುರಿತ ಕಾರ್ಯವಿಧಾನವನ್ನು ತಿಳಿಸಿಕೊಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿದೆ.
ಇದೇ ವೇಳೆ ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿ ಮೋಹಿನ್ ಖಾನ್ ಎಂಬುವರು ಆನ್‍ಲೈನ್‍ನಲ್ಲಿ ವಿಚಾರಣೆಗೆ ಭಾಗಿಯಾಗಿ ನ್ಯಾಯಪೀಠಕ್ಕೆ ವಿವರಣೆ ನೀಡಿದರು. ಶೈಲೇಶ್‍ಗೆ ಶಿಕ್ಷೆ ವಿಧಿಸಿರುವ ಆದೇಶದ ಪ್ರತಿ ಪಡೆದುಕೊಳ್ಳುವ ಸಂಬಂಧ ಈಗಾಗಲೇ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ. ಆದರೆ, ಈವರೆಗೂ ಆದೇಶದ ಪ್ರತಿ ಸಿಕ್ಕಿಲ್ಲ. ಈ ಸಂಬಂಧ ಪ್ರಯತ್ನ ಮಾಡುತ್ತಿರುವುದಾಗಿ ನ್ಯಾಯಪೀಠಕ್ಕೆ ವಿವರಿಸಿದರು. ಇದಕ್ಕೆ ನ್ಯಾಯಪೀಠ, ಆದೇಶ ಪ್ರತಿ ಪಡೆದುಕೊಳ್ಳುವುದಕ್ಕೆ ಇನ್ನೂ ಎಷ್ಟು ದಿನಗಳ ಕಾಲ ಅಗತ್ಯವಿದೆ ಎಂದು ಪ್ರಶ್ನಿಸಿದೆ.
ಇದಕ್ಕೆ ಉತ್ತರಿಸಿದ ಅವರು, ಸೌದಿ ನ್ಯಾಯಾಲಯಗಳು ಆದೇಶದ ಪ್ರತಿಯನ್ನು ಶಿಕ್ಷೆಗೆ ಗುರಿಯಾದವರಿಗೆ ಮಾತ್ರ ನೀಡಬಹುದು. ಇತರರಿಗೆ ನೀಡುವ ಪರಿಪಾಠ ಇಲ್ಲ. ಆದರೂ, ಪ್ರಯತ್ನ ಮಾಡಲಾಗುತ್ತಿದೆ. ಎಷ್ಟು ದಿನಗಳಲ್ಲಿ ಸಿಗಲಿದೆ ಎಂದು ಹೇಳಲಾಗದು ಎಂದು ವಿವರಿಸಿದರು. ಈ ಅಂಶವನ್ನು ಪರಿಗಣಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.