ಸಿದ್ಧಗಂಗಾ ಶ್ರೀಗಳಿಗೆ ಮರಣೋತ್ತರ ‘ಭಾರತ ರತ್ನ’ ಸಿಗಲಿ: ರಣದೀಪ್ ಸಿಂಗ್ ಸುರ್ಜೇವಾಲ

Update: 2024-02-03 15:24 GMT

ಬೆಂಗಳೂರು: ಸಿದ್ಧಗಂಗಾ ಮಠದ  ಶಿವಕುಮಾರ ಸ್ವಾಮೀಜಿ ಅವರಿಗೆ  ಮರಣೋತ್ತರ ಭಾರತ ರತ್ನ ಸಿಗಬೇಕು. ಈ ಗೌರವಕ್ಕೆ ಅವರಂತಹ ಅರ್ಹರು ಮತ್ತೊಬ್ಬರಿಲ್ಲ. ಅವರಿಗೆ ಈ ಹಿಂದೆಯೇ ಈ ಗೌರವ ಸಿಗಬೇಕಿತ್ತು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ.

ಶನಿವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅನ್ನ, ಶಿಕ್ಷಣ ನೀಡಿ ಲಕ್ಷಾಂತರ ಮಂದಿಗೆ ಆಸರೆಯಾಗಿ ನಿಂತ ಮಹಾತ್ಮರು ಅವರಾಗಿದ್ದಾರೆ. ಸಿದ್ಧಗಂಗಾ ಶ್ರೀಗಳು ದೇಶಕ್ಕೆ ಮಾದರಿಯಾಗಿದ್ದವರು. ಹೀಗಾಗಿ ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಶಿವಕುಮಾರ ಸ್ವಾಮೀಜಿ ಈ ಶತಮಾನ ಕಂಡ ಅಪರೂಪದ ಶರಣರಾಗಿದ್ದವರು. ಶ್ರೀಗಳು ಅನ್ನ, ಅಕ್ಷರ ಮತ್ತು ಜ್ಞಾನ ದಾಸೋಹಗಳ ಮೂಲಕ ತ್ರಿವಿಧ ದಾಸೋಹವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದವರು ಎಂದು ಸುರ್ಜೇವಾಲ ಹೇಳಿದ್ದಾರೆ.

ಯಾವುದೇ ಜಾತಿ, ಧರ್ಮ ಭೇದ ಇಲ್ಲಿಲ್ಲ. ಎಲ್ಲರೂ ಒಂದೇ ಎಂಬ ರೀತಿಯಲ್ಲಿ ಸಹಾಯ. ಬೇಡಿ ಬಂದ ಲಕ್ಷಾಂತರ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ, ಆಹಾರ ನೀಡಿ ಸಮಾಜದಲ್ಲಿ ಒಂದು ಉತ್ತಮ ಸ್ಥಾನವನ್ನು ಹಾಗೂ ಹೆಸರನ್ನು ಗಳಿಸುವಂತೆ ಮಾಡಿದವರು ಅವರು ಎಂದು ಸುರ್ಜೇವಾಲ ಹೇಳಿದ್ದಾರೆ.

ನಿಜವಾಗಿಯೂ ಭಾರತದ ಅಮೂಲ್ಯ ರತ್ನವಾಗಿರುವಂಥ ಕರ್ನಾಟಕದ ಈ ಮಹಾನ್ ಪುರುಷ, ಅವತಾರ ಪುರುಷರಾಗಿರುವ ಶಿವಕುಮಾರ ಶ್ರೀಗಳಿಗೆ ಕೇಂದ್ರ ಸರಕಾರವು ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸುವುದು ಆದ್ಯ ಕರ್ತವ್ಯವಾಗಿದೆ ಎಂಬುದು ನನ್ನ ಭಾವನೆಯಾಗಿದೆ. ಇದು ಆರೂವರೆ ಕೋಟಿ ಕನ್ನಡಿಗರ ಅಭಿಮತವೂ ಆಗಿದೆ ಎಂಬುದು ನನ್ನ ಅನ್ನಿಸಿಕೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News