ಬಂಡವಾಳ ಹೂಡಿಕೆದಾರರ ಸಮಾವೇಶ : ಒಡಂಬಡಿಕೆಗಳ ತ್ವರಿತ ಅನುಷ್ಠಾನಕ್ಕೆ ಸಚಿವ ಎಂ.ಬಿ.ಪಾಟೀಲ್ ನಿರ್ದೇಶನ

Update: 2025-02-28 21:47 IST
ಬಂಡವಾಳ ಹೂಡಿಕೆದಾರರ ಸಮಾವೇಶ : ಒಡಂಬಡಿಕೆಗಳ ತ್ವರಿತ ಅನುಷ್ಠಾನಕ್ಕೆ ಸಚಿವ ಎಂ.ಬಿ.ಪಾಟೀಲ್ ನಿರ್ದೇಶನ
  • whatsapp icon

ಬೆಂಗಳೂರು : ಇತ್ತೀಚೆಗೆ ನಡೆಸಲಾದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಆಗುರುವ ಹೂಡಿಕೆ ಒಡಂಬಡಿಕೆಗಳ ಪರುಣಾಮಕಾರಿ ಅನುಷ್ಠಾನಕ್ಕೆ ಸಮರೋಪಾದಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟು ನಿರ್ದೇಶನ ನೀಡಿದ್ದಾರೆ.

ಶುಕ್ರವಾರ ಖನಿಜ ಭವನದಲ್ಲಿ ಈ ಸಂಬಂಧವಾಗಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಕೆಐಎಡಿಬಿ, ಉದ್ಯೋಗ ಮಿತ್ರ, ಭುಸ್ವಾಧೀನ ವಿಭಾಗ ಮತ್ತು ಇನ್ವೆಸ್ಟ್ ಕರ್ನಾಟಕ ಫೋರಂನ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿ ಮಾತನಾಡಿದ ಅವರು, ಹೂಡಿಕೆದಾರರು ಭಾರೀ ನಿರೀಕ್ಷೆಯೊಂದಿಗೆ ಒಡಂಬಡಿಕೆಗಳನ್ನು ಮಾಡಿಕೊಂಡಿದ್ದಾರೆ. ಆದ್ದರಿಂದ ಅಧಿಕಾರಿಗಳು ಭೂಮಿಯ ಲಭ್ಯತೆ, ಸ್ವಾಧೀನ ಪ್ರಕ್ರಿಯೆ, ಇರಬಹುದಾದ ವಿವಾದಗಳ ಇತ್ಯರ್ಥ, ಈಗಾಗಲೇ ಸರಕಾರದ ಮಟ್ಟದಲ್ಲಿ ಇರುವ ಭೂಮಿ ಇವುಗಳ ಬಗ್ಗೆ ತಿಳಿವಳಿಕೆ ಹೊಂದಿರಬೇಕು ಎಂದು ತಿಳಿಸಿದರು.

ಸುಗಮ ಹೂಡಿಕೆಗೆ ಕೈಗಾರಿಕಾ ಇಲಾಖೆಯು ಉದ್ಯಮಿಸ್ನೇಹಿ ಏಕಗವಾಕ್ಷಿ ವ್ಯವಸ್ಥೆಯನ್ನು ಕೂಡ ರೂಪಿಸಿದೆ. ಈ ಬಗ್ಗೆ ಕೂಡ ಸಂಬಂಧಿಸಿದ ಉಳಿದ ಇಲಾಖೆಗಳ ಅಧಿಕಾರಿಗಳಲ್ಲೂ ಜಾಗೃತಿ ಮೂಡಿಸಬೇಕು. ಕೈಗಾರಿಕಾ ಯೋಜನೆಗಳ ಜತೆ ಕಂದಾಯ, ಅರಣ್ಯ, ಇಂಧನ, ನಗರಾಭಿವೃದ್ಧಿ, ಮಾಲಿನ್ಯ ನಿಯಂತ್ರಣ ಮಂಡಲಿ, ಬಿಡಬ್ಲ್ಯುಎಸ್‍ಎಸ್‍ಬಿ ಮುಂತಾದ ಇಲಾಖೆಗಳು ನಿಕಟ ಸಂಬಂಧ ಹೊಂದಿವೆ. ಈ ಇಲಾಖೆಗಳಿಂದ ಕೈಗಾರಿಕಾ ಯೋಜನೆಗಳಿಗೆ ಅನುಮತಿ ಅಗತ್ಯ. ಇವೆಲ್ಲವುಗಳ ಜೊತೆ ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಸಮನ್ವಯ ಸಾಧಿಸಬೇಕು ಎಂದು ಅವರು ಸೂಚಿಸಿದರು.

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ್, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು, ಐಕೆಎಫ್ ಹೆಚ್ಚುವರಿ ನಿರ್ದೇಶಕರಾದ ಶಿವಕುಮಾರ, ಜಗದೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News