ಕಾಂಗ್ರೆಸ್‍ನಲ್ಲಿ ಬೇಗುದಿಯಿಲ್ಲ, ನಮ್ಮಲ್ಲಿ ಎಲ್ಲರೂ ಒಂದಾಗಿದ್ದೇವೆ: ಎಂ.ಬಿ.ಪಾಟೀಲ್

ಎಂ.ಬಿ.ಪಾಟೀಲ್
ಬೆಂಗಳೂರು : ಕಾಂಗ್ರೆಸ್‍ನಲ್ಲಿ ಯಾವುದೇ ಬೇಗುದಿಯಿಲ್ಲ. ನಮ್ಮಲ್ಲಿ ಎಲ್ಲರೂ ಒಂದಾಗಿದ್ದೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಐದು ವರ್ಷ ಅವಧಿ ಪೂರೈಸಿದ ಅಂಗವಾಗಿ ಪಕ್ಷದ ಶಾಸಕರಿಗೆ ಭೋಜನಾ ವ್ಯವಸ್ಥೆ ಮಾಡಿದ್ದರು. ಡಾ.ಜಿ.ಪರಮೇಶ್ವರ್ ಹೊರತುಪಡಿಸಿ ಎಲ್ಲರೂ ಅದರಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್‍ನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದರು.
ಡಿ.ಕೆ.ಶಿವಕುಮಾರ್ ಅವರ ಭೋಜನಾ ಕೂಟಕ್ಕೆ ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ ಭಾಗವಹಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದ್ದರು. ಪಕ್ಷದಲ್ಲಿ ಬೇಗುದಿ ಇರಲು ಸಾಧ್ಯವಿಲ್ಲ. ಜಿ.ಪರಮೇಶ್ವರ್ ಅವರ ಕಡೆಯ ವ್ಯಕ್ತಿಯೊಬ್ಬರು ನಿಧನರಾಗಿದ್ದರು. ಈ ಕಾರಣಕ್ಕಾಗಿ ಅವರು ಭೋಜನಾಕೂಟದಲ್ಲಿ ಭಾಗವಹಿಸಿರಲಿಲ್ಲ. ಉಳಿದಂತೆ ಎಲ್ಲರೂ ಭಾಗವಹಿಸಿದ್ದರು ಎಂದು ಎಂ.ಬಿ.ಪಾಟೀಲ್ ಹೇಳಿದರು.
ಡಿ.ಕೆ.ಶಿವಕುಮಾರ್ 5 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಅವಧಿ ಪೂರ್ಣಗೊಳಿಸಿದ್ದಕ್ಕಾಗಿ ಕಾಂಗ್ರೆಸ್ ಶಾಸಕರಿಗೆ ಊಟ ಕೊಡಿಸಿದ್ದರು. ಕೆಪಿಸಿಸಿಯ ಮುಂದಿನ ಅಧ್ಯಕ್ಷರು ಯಾರು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ನಮ್ಮ ಹಂತದಲ್ಲಿ ಯಾವುದೇ ಚರ್ಚೆಗಳಾಗುವುದಿಲ್ಲ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.