ಮೆಡಿಕಲ್, ಎಂಜಿನಿಯರಿಂಗ್ ಏಕಕಾಲದಲ್ಲಿ ಸೀಟು ಹಂಚಿಕೆ, ಆತಂಕ ಬೇಡ : ಕೆಇಎ

Update: 2024-07-25 15:31 GMT

ಬೆಂಗಳೂರು : ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಎಲ್ಲ ಕೋರ್ಸುಗಳ ಪ್ರವೇಶಕ್ಕೆ ಈ ಬಾರಿ ಏಕಕಾಲದಲ್ಲೇ ಸೀಟು ಹಂಚಿಕೆ ಪ್ರಕ್ರಿಯೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಪ್ರಕಟನೆ ಹೊರಡಿಸಿರುವ ಅವರು, ಮೊದಲ ಸುತ್ತಿನ ಸೀಟು ಹಂಚಿಕೆಗೆ ಆದ್ಯತೆಗಳನ್ನು ದಾಖಲಿಸಲು ಎಂಜಿನಿಯರಿಂಗ್, ಪಶುವೈದ್ಯಕೀಯ ಇತ್ಯಾದಿ ಕೋರ್ಸ್‍ಗಳಿಗೆ ಅವಕಾಶ ನೀಡಿದ್ದು, ಇದು ಏಳು ದಿನಗಳವರೆಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ವೈದ್ಯಕೀಯ ಆಯೋಗ ನೀಟ್ ಪರೀಕ್ಷೆಯ ಫಲಿತಾಂಶದ ಪಟ್ಟಿಯನ್ನು ಕೆಇಎಗೆ ಹಸ್ತಾಂತರಿಸಿದ ನಂತರ ವೈದ್ಯಕೀಯ, ದಂತ ವೈದ್ಯಕೀಯ ಸೇರಿದಂತೆ ಇತರ ವೈದ್ಯಕೀಯ ಕೋರ್ಸುಗಳ ಆದ್ಯತೆಗಳನ್ನು ದಾಖಲಿಸಲು ಅವಕಾಶ ನೀಡಲಾಗುವುದು ಎಂದು ಅವರು ವಿವರಿಸಿದರು.

ಈ ವಿಷಯದಲ್ಲಿ ಅಭ್ಯರ್ಥಿಗಳಾಗಲಿ ಅಥವಾ ಪೋಷಕರಾಗಲಿ ಗಾಬರಿ ಪಡುವ ಅಗತ್ಯ ಇಲ್ಲ. ನೀಟ್ ಮಾಹಿತಿ ಇನ್ನೂ ಬರುವುದು ತಡವಾಗುತ್ತಿರುವ ಕಾರಣ ಎಂಜಿನಿಯರಿಂಗ್ ಸೇರಿದಂತೆ ಇತರ ಕೋರ್ಸ್ ಗಳ ಪ್ರವೇಶ ಸಂಬಂಧ ಆದ್ಯತೆಗಳನ್ನು ದಾಖಲಿಸಲು ಮೊದಲು ಅವಕಾಶ ನೀಡಲಾಗಿದೆ. ನಂತರ ವೈದ್ಯಕೀಯ ಕೋರ್ಸ್‍ಗೂ ಅವಕಾಶ ಕೊಡುತ್ತೇವೆ. ಅದರ ಬಳಿಕವೇ ಅಣಕು ಸೀಟು ಹಂಚಿಕೆ, ನೈಜ ಸೀಟು ಹಂಚಿಕೆಯನ್ನು ಏಕಕಾಲದಲ್ಲಿಯೇ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ರಾಷ್ಟ್ರೀಯ ವೈದ್ಯಕೀಯ ಆಯೋಗದ ಜತೆಗೂ ಕೆಇಎ ನಿರಂತರ ಸಂಪರ್ಕದಲ್ಲಿ ಇದ್ದು, ಈ ವಾರದಲ್ಲಿ ರಾಷ್ಟ್ರಮಟ್ಟದ ವೈದ್ಯಕೀಯ ಕೌನ್ಸೆಲಿಂಗ್ ದಿನಾಂಕಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಅದರ ನಂತರ ರಾಜ್ಯದ ಸೀಟು ಹಂಚಿಕೆಯ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು. ದ್ವಿತೀಯ ಪಿಯುಸಿ ಮೂರನೇ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಈ ಹಂತದಲ್ಲಿ ಸೀಟು ಹಂಚಿಕೆಗೆ ಪರಿಗಣಿಸುವುದು ಕಷ್ಟ ಸಾಧ್ಯ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಕುರಿತು ಸರ್ಕಾರ ನೀಡುವ ಸೂಚನೆ ಪ್ರಕಾರ ಅವರಿಗೂ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಅಭ್ಯರ್ಥಿಗಳು ಪ್ರತಿನಿತ್ಯ ಕನಿಷ್ಠ ಎರಡು ಬಾರಿ ಕೆಇಎ ವೆಬ್‍ಸೈಟ್ ಗೆ ಭೇಟಿ ಕೊಡಬೇಕು. ಆ ಮೂಲಕ ಕಾಲಕಾಲಕ್ಕೆ ಕೆಇಎ ಹೊರಡಿಸುವ ಪ್ರಕಟಣೆಗಳನ್ನು ಗಮನಿಸಿ, ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News