ʼನಮ್ಮ ಮೆಟ್ರೋʼ 69 ಕಿ.ಮೀ. ಕಾರ್ಯಾಚರಣೆ; ಪ್ರತಿದಿನ 6.1 ಲಕ್ಷ ಜನರು ಸಂಚಾರ: ಸಿಎಂ ಸಿದ್ದರಾಮಯ್ಯ

Update: 2023-08-15 06:12 GMT

ಬೆಂಗಳೂರು: ʼʼಬೆಂಗಳೂರು ಮೆಟ್ರೋ ಪ್ರಸ್ತುತ 69.66 ಕಿ.ಮೀ. ಕಾರ್ಯಾಚರಣೆ ನಡೆಸುತ್ತಿದ್ದು, ಪ್ರತಿದಿನ 6.1 ಲಕ್ಷ ಪ್ರಯಾಣಿಕರು ಮೆಟ್ರೋ ರೈಲು ಸೇವೆಯನ್ನು ಪಡೆಯುತ್ತಿದ್ದಾರೆʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 

77ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಮಾಣಿಕ್ ಶಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು. .ಬಳಿಕ ಮಾತನಾಡಿದ ಅವರು, ʼʼ2023ರ ಸೆಪ್ಟೆಂಬರ್‌ ನಲ್ಲಿ ಬೈಯಪ್ಪನಹಳ್ಳಿ-ಕೃಷ್ಣರಾಜಪುರ ಮಾರ್ಗ, ಕೆಂಗೇರಿ-ಚಲ್ಲಘಟ್ಟ ವಿಸ್ತರಣೆ, ಡಿಸೆಂಬರ್ ವೇಳೆಗೆ ನಾಗಸಂದ್ರ-ಮಾದಾವರ ವಿಸ್ತರಣೆ, ಆರ್.ವಿ.ರಸ್ತೆ-ಬೊಮ್ಮನಹಳ್ಳಿ ಹೊಸಮಾರ್ಗ ಕಾರ್ಯಾಚರಣೆ ಪ್ರಾರಂಭಿಸಲಾಗುವುದು. 2026ರ ವೇಳೆಗೆ ಬೆಂಗಳೂರಿನಲ್ಲಿ 175.55 ಕಿ.ಮೀ. ಮೆಟ್ರೋ ಜಾಲ ಕಾರ್ಯಾಚರಣೆ ನಡೆಸಲಿದೆ. ಈಗ ಬೆಂಗಳೂರಿನ ಮೆಟ್ರೋ ಜಾಲವು ದೇಶದಲ್ಲಿ ಎರಡನೆ ಸ್ಥಾನದಲ್ಲಿದೆʼʼ ಎಂದು ಹರ್ಷ ವ್ಯಕ್ತಪಡಿಸಿದರು. 

ʼʼಬೆಂಗಳೂರಿನ ಜನದಟ್ಟಣೆಯನ್ನು ಕಡಿಮೆಗೊಳಿಸಲು ನಗರದ ಹೊರವಲಯದಲ್ಲಿ ಜನರು ಪ್ರತಿದಿನ ಪ್ರಯಾಣಿಸಲು ಅನುಕೂಲವಾಗುವಂತೆ ರಸ್ತೆ, ರೈಲು ಸಂಪರ್ಕದೊಂದಿಗೆ ಉಪನಗರಗಳನ್ನು ಅಭಿವೃದ್ಧಿ ಪಡಿಸಲಾಗುವುದು. ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿಗಳಲ್ಲಿ ಉಪನಗರ ಟೌನ್‍ಶಿಪ್‍ಗಳನ್ನು ಅಭಿವೃದ್ಧಿಪಡಿಸಲಾಗುವುದುʼʼ ಎಂದು ತಿಳಿಸಿದರು. 

ʼʼನಮ್ಮ 5 ವರ್ಷಗಳ ಅವಧಿಯಲ್ಲಿ ಅಗತ್ಯ ಇರುವವರಿಗೆ ಸೂರು ನೀಡಲು ಯೋಜಿಸಿದ್ದೇವೆ. ಸರ್ಕಾರಿ ಬಸ್ಸುಗಳ ಟ್ರ್ಯಾಕಿಂಗ್ ವ್ಯವಸ್ಥೆ, ಪ್ಯಾನಿಕ್ ಬಟನ್ ವ್ಯವಸ್ಥೆಯನ್ನು ಪ್ರಾರಂಭಿಸುತ್ತಿದ್ದೇವೆ. ಅಗತ್ಯ ಇರುವೆಡೆ ಹೊಸ ಬಸ್ಸುಗಳನ್ನು ಒದಗಿಸಲು ಸಿದ್ಧರಿದ್ದೇವೆʼʼ ಎಂದು ಭರವಸೆ ನೀಡಿದರು.


 



 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News