ಅಕ್ಟೋಬರ್ ನಲ್ಲಿ ನಾಗಸಂದ್ರ-ಮಾದಾವರ ಮಾರ್ಗದಲ್ಲಿ ʼನಮ್ಮ ಮೆಟ್ರೋʼ ಸಂಚಾರ ಆರಂಭ ಸಾಧ್ಯತೆ

Update: 2023-08-07 13:46 GMT

ಚಿತ್ರ (  ನಮ್ಮ ಮೆಟ್ರೊ - ನಾಗಸಂದ್ರ )

ಬೆಂಗಳೂರು, ಆ.7: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ಮತ್ತೊಂದು ಮಾರ್ಗ ಇನ್ನೊಂದು ತಿಂಗಳಲ್ಲಿ ಸಜ್ಜಾಗಲಿದೆ. ಹಸಿರು ಮಾರ್ಗದ ನಾಗಸಂದ್ರದಿಂದ ಮಾದಾವರವರೆಗೆ ಮೆಟ್ರೋ ರೈಲು ಸಂಚಾರ ಅಕ್ಟೋಬರ್ ತಿಂಗಳಲ್ಲಿ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದೆ.

ನಾಗಸಂದ್ರದಿಂದ ಮಾದಾವರವರೆಗಿನ ಹಸಿರು ಮಾರ್ಗದ ವಿಸ್ತರಣೆಯ ಭಾಗವಾಗಿ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ ಬಳಿ ನೈಸ್ ಪೆರಿಫೆರಲ್ ರಿಂಗ್ ರಸ್ತೆಯ ಮೇಲಿದ್ದ ವೈಡಕ್ಟ್ ಕಟ್ಟಡದ ಅಡಚಣೆಯನ್ನು ತೆರವುಗೊಳಿಸಿದೆ.

ಪೆರಿಫೆರಲ್ ರಿಂಗ್ ರಸ್ತೆಯ ಮೇಲೆ ಯಾವ ಎತ್ತರದಲ್ಲಿ ಉಕ್ಕಿನ ಗರ್ಡರ್ ಗಳಿರಬೇಕು ಎನ್ನುವುದರ ಕುರಿತು ಇದ್ದ ಆತಂಕಗಳನ್ನು ದೂರ ಮಾಡಲಾಗಿದೆ. ನಂದಿ ಇನ್‍ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‍ಪ್ರೆಸಸ್ ಈ ಬಗ್ಗೆ ಪ್ರಶ್ನೆ ಮಾಡಿತ್ತು. ಈಗ ಎಲ್ಲ ಗೊಂದಲಗಳು ನಿವಾರಣೆಯಾಗಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಹೇಳಿದ್ದಾರೆ.

''ಬಿಎಂಆರ್‍ಸಿಎಲ್ ಅಸ್ತಿತ್ವದಲ್ಲಿರುವ ನೈಸ್ ರಸ್ತೆಯ ಮೇಲೆ ಮೆಟ್ರೋ ಮಾರ್ಗವನ್ನು ನಿರ್ಮಿಸುವ ಕುರಿತು ನೈಸ್ ಮತ್ತು ಬಿಡಿಎನೊಂದಿಗೆ ತ್ರಿಪಕ್ಷೀಯ ಒಪ್ಪಂದವನ್ನು ಮಾಡಿಕೊಂಡಿತು. ರಸ್ತೆ ಸಮೀಪವಿರುವ ಮೆಟ್ರೋದ ಎಲಿವೇಟೆಡ್ ಲೈನ್‍ನ ಎತ್ತರ ಸಾಕಾಗುವುದಿಲ್ಲ ಎಂದು ಮೊದಲು ಕಳವಳ ವ್ಯಕ್ತಪಡಿಸಲಾಯಿತು. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾನದಂಡಗಳ ಪ್ರಕಾರ, ಎತ್ತರವು 5.5 ಮೀಟರ್ ಇರಬೇಕು. ಆದರೆ ನಮ್ಮ ವಯಾಡಕ್ಟ್‍ಗಳು 5.8 ಮೀಟರ್ ಎತ್ತರದಲ್ಲಿದೆ. ಕೊನೆಗೆ ಎಲ್ಲರೂ ಒಪ್ಪಿಗೆ ಸೂಚಿಸಿದರು ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ, ಬಿಎಂಆರ್‍ಸಿಎಲ್ ಕ್ರೇನ್‍ಗಳ ಸಹಾಯದಿಂದ ನೈಸ್ ರಸ್ತೆಯ ಉದ್ದಕ್ಕೂ ಸ್ಟೀಲ್ ಗರ್ಡರ್ ಅಳವಡಿಸಿದೆ. ಇದರ ಉದ್ದ 53 ಮೀಟರ್. ನಾವು ಮೆಟ್ರೋ ಕಾರಿಡಾರ್ ನ ಲೂಪ್ ಲೈನ್‍ನಲ್ಲಿ ಗರ್ಡರ್ ಇರಿಸುವ ಕೆಲಸವನ್ನೂ ಪೂರ್ಣಗೊಳಿಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News