ಸರಕಾರಿ ಭೂಮಿ ಒತ್ತುವರಿ ತೆರವಿಗೆ ಕಠಿಣ ಕ್ರಮ : ಸಚಿವ ಕೃಷ್ಣಭೈರೇಗೌಡ

ಕೃಷ್ಣಭೈರೇಗೌಡ
ಬೆಂಗಳೂರು : ಸರಕಾರಿ ಭೂಮಿ ಒತ್ತುವರಿ ತೆರವಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಬುಧವಾರ ಪರಿಷತ್‍ನ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಟಿ.ಎ.ಶರವಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯಾದ್ಯಂತ ಗೋಮಾಳ, ಕೆರೆ ಸೇರಿದಂತೆ ಸರಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಲಾಗುತ್ತಿದೆ ಎಂದರು.
ಪ್ರತಿ ತಾಲ್ಲೂಕಿನಲ್ಲೂ ನಕಲಿ ದಾಖಲೆ ಸೃಷ್ಟಿಸಿ ಬೇರೊಬ್ಬರಿಗೆ ಸರಕಾರಿ ಭೂಮಿ ಮಾರಾಟ ಮಾಡಲು ಅವಕಾಶವಿಲ್ಲದಂತೆ ನಿರ್ಬಂಧಿಸಲು ಸೂಕ್ತ ಕಾನೂನು ಜಾರಿಗೊಳಿಸಲಾಗುವುದು. ಸರಕಾರಿ ಜಮೀನು ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪ್ರತಿ ತಾಲ್ಲೂಕಿನಲ್ಲೂ ವಾರಕ್ಕೆ ಎರಡು ಬಾರಿ ಕೈಗೊಳ್ಳಲು ಸೂಚಿಸಲಾಗಿದೆ. ಈಗಾಗಲೇ ಈ ಕಾರ್ಯ ಆರಂಭವಾಗಿದ್ದು, ಮತ್ತಷ್ಟು ಶೀಘ್ರಗೊಳಿಸಲಾಗುವುದು ಎಂದು ಕೃಷ್ಣಭೈರೇಗೌಡ ಹೇಳಿದರು.
ಬೆಂಗಳೂರು ನಗರ ಜಿಲ್ಲೆಯಲ್ಲಿ ಸರಕಾರಿ ಭೂಮಿ ಒತ್ತುವರಿ ಬಗ್ಗೆ 272 ದೂರುಗಳು ಬಂದಿವೆ. ಮಾರ್ಗಸೂಚಿ ಮತ್ತು ಮಾರುಕಟ್ಟೆ ಬೆಲೆಯಂತೆ ನಗರ ಜಿಲ್ಲೆಯ ವಿವಿಧ ಗ್ರಾಮಗಳ ಸರಕಾರಿ ಜಮೀನಿಗೆ ಒಂದೊಂದು ಮೌಲ್ಯ ನಿಗದಿಪಡಿಸಲಾಗಿದೆ. ಒತ್ತುವರಿ ಮಾಡಿಕೊಂಡಿರುವವರಿಗೆ ನೋಟಿಸ್ ನೀಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿ ಹಂತ ಹಂತವಾಗಿ ತೆರವುಗೊಳಿಸಲಾಗುತ್ತದೆ ಎಂದು ಕೃಷ್ಣಭೈರೇಗೌಡ ತಿಳಿಸಿದರು.
ತಹಶೀಲ್ದಾರ್ ಹಂತದಲ್ಲಿ ಒತ್ತುವರಿದಾರರ ವಿರುದ್ಧ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಕ್ರಮ ವಹಿಸಲಾಗಿದೆ. ಒತ್ತುವರಿದಾರರ ವಿರುದ್ಧ ಪೊಲೀಸ್ ಠಾಣೆಯಲ್ಲೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತಿದೆ. ಒತ್ತುವರಿ ತೆರವುಗೊಳಿಸಿದ ಜಮೀನುಗಳನ್ನು ಸಾರ್ವಜನಿಕ ಉದ್ದೇಶಗಳಿಗೆ ಕಾಯ್ದಿರಿಸಲಾಗುತ್ತದೆ ಎಂದು ಕೃಷ್ಣಭೈರೇಗೌಡ ತಿಳಿಸಿದರು.