ಪ್ರೌಢಶಾಲಾ ಸಹ ಶಿಕ್ಷಕರಾಗಿ ಭಡ್ತಿ ಹೊಂದಿದ್ದರೆ, ವೇತನ ಭಡ್ತಿಗೆ ಅವಕಾಶ ಇಲ್ಲ: ಸಚಿವ ಮಧು ಬಂಗಾರಪ್ಪ
Update: 2025-03-19 21:15 IST

ಬೆಂಗಳೂರು : ಪ್ರಾಥಮಿಕ ಶಾಲಾ ಶಿಕ್ಷಕರು ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಗೆ ಬಡ್ತಿ ಪಡೆದಿರುವ ಶಿಕ್ಷಕರಿಗೆ 20, 25, 30 ವರ್ಷಗಳ ವೇತನ ಬಡ್ತಿ ಮಂಜೂರಾತಿಗೆ ಅವಕಾಶವಿರುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದ್ದಾರೆ.
ಬುಧವಾರ ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಅವರು ಪ್ರಶ್ನೆಗೆ ಉತ್ತರಿಸಿದ ಅವರು, ಸೇವಾ ಅವಧಿಯಲ್ಲಿ ಯಾವುದೇ ಪದೋನ್ನತಿ ಪಡೆಯದೇ ಇರುವ ಶಿಕ್ಷಕರಿಗೆ ಮಾತ್ರ 20, 25, 30 ವರ್ಷಗಳ ಬಡ್ತಿ ಮಂಜೂರಾತಿ ಮಾಡಲು ಅವಕಾಶವಿರುತ್ತದೆ ಎಂದರು.
ಹಲವಾರು ಪ್ರಕರಣಗಳಲ್ಲಿ ಪ್ರಾಥಮಿಕ/ಪ್ರೌಢ ಶಿಕ್ಷಕರಾಗಿ ಹಾಗೂ ಪದವಿ ಪೂರ್ವ ಉಪನ್ಯಾಸಕರಾಗಿ ಬಡ್ತಿ ಹೊಂದಿದ ಶಿಕ್ಷಕರಿಗಿಂತ ಬಡ್ತಿ ಹೊಂದದೇ ಇರುವ ಕಾರಣಕ್ಕಾಗಿ ಹೆಚ್ಚುವರಿ ವೇತನ ಬಡ್ತಿಗಳನ್ನು ಪಡೆದ ಶಿಕ್ಷಕರ ವೇತನ ಹೆಚ್ಚಾಗಿರುವುದು ಕಂಡುಬಂದಿದೆ ಎಂದು ಅವರು ಸ್ಪಷ್ಟಪಡಿಸಿದರು.