ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆ
ಬೆಂಗಳೂರು : ಟೊಯೊಟಾ ಕಿರ್ಲೊಸ್ಕರ್ ಮೋಟರ್ಸ್ ಲಿ.ನ (ಟಿಕೆಎಂಎಲ್) ಇನೊವಾ ಹೈಕ್ರಾಸ್ ಕಾರಿನ ಬೇಡಿಕೆ ಪೂರೈಸಲು ಅಗತ್ಯವಾದ ಬಿಡಿಭಾಗಗಳನ್ನು ತಯಾರಿಸಲು ಬಿಡದಿಯಲ್ಲಿ 450 ಕೋಟಿ ರೂ.ವೆಚ್ಚದಲ್ಲಿ ಟೊಯೊಟೆಟ್ಸು ಇಂಡಿಯಾ ಆಟೊಪಾರ್ಟ್ಸ್ ಪ್ರೈವೇಟ್ ಲಿ.ಘಟಕ ಸ್ಥಾಪಿಸಲು ಶನಿವಾರ ಇಲ್ಲಿ ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯು ಒಪ್ಪಿಗೆ ನೀಡಿದೆ.
ಶನಿವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು 2,280 ಕೋಟಿ ರೂ.ಮೊತ್ತದ ಬಂಡವಾಳ ಹೂಡಿಕೆಯ ಒಟ್ಟು 20ಯೋಜನೆಗಳಿಗೆ ಅನುಮೋದನೆ ನೀಡಿದೆ. ಇದರಿಂದ ರಾಜ್ಯದಲ್ಲಿ 3,457 ಜನರಿಗೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ.
‘ಸಮಿತಿಯು ಅನುಮೋದಿಸಿದ ಯೋಜನೆಗಳಲ್ಲಿ ಮುಂಬೈನ ಐಎಲ್‍ವಿ ಸೌತ್ ವೇರ್‍ಹೌಸಿಂಗ್ ಪಾರ್ಕ್ಸ್ ಪ್ರೈವೇಟ್ ಲಿ.ನ 423 ಕೋಟಿ ರೂ.ಮೊತ್ತದ ಕೈಗಾರಿಕಾ ಪಾರ್ಕ್, ಬೆಳಗಾವಿಯ ಮೃಣಾಲ್ ಶುಗರ್ಸ್ ಲಿ. ಧಾರವಾಡ ಜಿಲ್ಲೆಯಲ್ಲಿ 386 ಕೋಟಿ ರೂ.ವೆಚ್ಚದ ಸಕ್ಕರೆ ಕಾರ್ಖಾನೆ ಸ್ಥಾಪನೆ, ಅಯೊಮಾ ಆಟೊಮೋಟಿವ್ ಫಾಸ್ಟನರ್ಸ್ (ಇಂಡಿಯಾ) ಪ್ರೈವೇಟ್ ಲಿ.ತುಮಕೂರು ಜಿಲ್ಲೆ ವಸಂತನರಸಾಪುರದಲ್ಲಿ 210 ಕೋಟಿ ರೂ. ವಾಹನ ಬಿಡಿಭಾಗ ತಯಾರಿಕಾ ಘಟಕಗಳ ಸ್ಥಾಪನೆಯು ಪ್ರಮುಖವಾಗಿವೆ. ವೈಮಾಂತರಿಕ್ಷ ಜೋಡಣಾ ಘಟಕ, ಹಾಲು ಸಂಸ್ಕರಣಾ ಘಟಕಗಳೂ ಒಪ್ಪಿಗೆ ಪಡೆದ ಯೋಜನೆಗಳಲ್ಲಿ ಸೇರಿವೆ.
ರಾಮನಗರ, ಕೋಲಾರ, ಬೆಳಗಾವಿ, ತುಮಕೂರು, ಧಾರವಾಡ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಈ ಕೈಗಾರಿಕಾ ಘಟಕಗಳು ಅಸ್ತಿತ್ವಕ್ಕೆ ಬರಲಿವೆ. 50 ಕೋಟಿ ರೂ.ಗೂ ಹೆಚ್ಚಿನ ಬಂಡವಾಳ ಹೂಡಿಕೆಯ 6 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಿಂದ ರಾಜ್ಯದಲ್ಲಿ 2025 ಕೋಟಿ ರೂ.ಮೊತ್ತದ ಬಂಡವಾಳ ಹೂಡಿಕೆಯೊಂದಿಗೆ 2,440 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ.
15 ಕೋಟಿ ರೂ.ಗಳಿಂದ 50 ಕೋಟಿ ರೂ.ಮೊತ್ತದ ಒಳಗಿನ ಬಂಡವಾಳ ಹೂಡಿಕೆಯ 13 ಹೊಸ ಯೋಜನೆಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇವುಗಳಿಂದ 214.81 ಕೋಟಿ ರೂ.ಮೊತ್ತದ ಬಂಡವಾಳ ಹೂಡಿಕೆಯೊಂದಿಗೆ 1,017 ಜನರಿಗೆ ಉದ್ಯೋಗಗಳು ಲಭ್ಯವಾಗಲಿವೆ. ಹೆಚ್ಚುವರಿ ಬಂಡವಾಳ ಹೂಡಿಕೆಯ 1 ಯೋಜನೆಗೆ ಸಭೆಯು ಅನುಮೋದಿಸಿದ್ದು ಇದರಿಂದ 40 ಕೋಟಿ ರೂ.ಬಂಡವಾಳ ಹೂಡಿಕೆ ಆಗಲಿದೆ ಎಂದು ಸಚಿವ ಪಾಟೀಲ್ ಮಾಹಿತಿ ನೀಡಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಐಟಿ-ಬಿಟಿ ಇಲಾಖೆಯ ನಿರ್ದೇಶಕ ದರ್ಶನ್ ಎಚ್. ವಿ., ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಹಾಗೂ ಇತರ ಉನ್ನತ ಅಧಿಕಾರಿಗಳು ಹಾಜರಿದ್ದರು.