‘ಕೆಎಚ್‍ಐಆರ್ ಸಿಟಿ ಯೋಜನೆʼಗೆ ಶೀಘ್ರದಲ್ಲೇ ಸಿಎಂ ಚಾಲನೆ : ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು : ಬೆಂಗಳೂರು ಹೊರವಲಯದ ದೊಡ್ಡಬಳ್ಳಾಪುರ-ದಾಬಸ್‍ಪೇಟೆ ಮಧ್ಯದಲ್ಲಿ ಕೆಎಚ್‍ಐಆರ್ ಸಿಟಿ ಇದೀಗ 2 ಸಾವಿರ ಎಕರೆ ಜಾಗದಲ್ಲಿ ತಲೆ ಎತ್ತಲಿದೆ. ಇದರಲ್ಲಿ 500 ಎಕರೆಯ ಮೊದಲ ಹಂತದ ಯೋಜನೆಗೆ ಸದ್ಯದಲ್ಲೇ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಮಂಗಳವಾರ ಇಲ್ಲಿನ ಖನಿಜ ಭವನದಲ್ಲಿ ಸಚಿವ ಎಂ.ಬಿ.ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಕೆಎಚ್‍ಐಆರ್ ಸಿಟಿ ಯೋಜನೆಯ ಸಲಹಾ ಮಂಡಳಿಯ ಪ್ರಥಮ ಸಭೆಯ ಬಳಿಕ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕೆಎಚ್‍ಐಆರ್ ಸಿಟಿ ಯೋಜನೆ ವಿಸ್ತರಣೆ ಆಗಲಿದೆ. ಇದಕ್ಕೆ ಸಲಹಾ ಸಮಿತಿಯ ಸದಸ್ಯರ ಸಹಕಾರ ಮತ್ತು ಪಾಲ್ಗೊಳ್ಳುವಿಕೆ ತುಂಬಾ ಅಗತ್ಯವಿದೆ ಎಂದರು.
ಇದೊಂದು ಅಸಾಂಪ್ರದಾಯಿಕ ಯೋಜನೆಯಾಗಿದೆ. ಇದು ಬೆಂಗಳೂರು ನಗರದ ಆರ್ಥಿಕತೆಯನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ಯಲಿದೆ. ಸಲಹಾ ಸಮಿತಿಯ ಸದಸ್ಯರು ನೀಡಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಪಾಟೀಲ್ ತಿಳಿಸಿದರು.
ಸಲಹಾ ಮಂಡಳಿ ಸದಸ್ಯರಾದ ನಾರಾಯಣ ಹೃದ್ರೋಗ ಸಂಸ್ಥೆ ಅಧ್ಯಕ್ಷ ಡಾ.ದೇವಿಶೆಟ್ಟಿ, ಬಯೊಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, ಇನ್ಫೋಸಿಸ್ ಆಡಳಿತ ಮಂಡಳಿಯ ಮೋಹನದಾಸ್ ಪೈ, ಹ್ರದ್ರೋಗ ತಜ್ಞ ಡಾ.ವಿವೇಕ್ ಜವಳಿ, ಆಕ್ಸಲ್ ಪಾಲುದಾರ ಪ್ರಶಾಂತ್ ಪ್ರಕಾಶ್, ಅಮೆರಿಕಾದ ಬೋಸ್ಟನ್ ವಿವಿ ಆಡಳಿತ ಮಂಡಳಿ ಟ್ರಸ್ಟಿ ರಾಂಚ್ ಕಿಂಬಾಲ್, ವೆಕ್ಸ್ ಫೋರ್ಡ್ ಸೈನ್ಸ್ ಆಂಡ್ ಟೆಕ್ನಾಲಜಿ ಸಂಸ್ಥೆ ಕಾರ್ಯನಿರ್ವಾಹಕ ಉಪಾಧ್ಯಕ್ಷ ಥಾಮಸ್ ಓಶ ಮತ್ತು ಆಸ್ಟೀನ್‍ನ ನಾವೀನ್ಯತೆ ಮತ್ತು ಉದ್ಯಮಶೀಲತೆ ವಿಭಾಗದ ಡೀನ್ ಸ್ಟೀಫನ್ ಎಕ್ಕರ್ ವರ್ಚುಯಲ್ ಆಗಿ ಸಭೆಯಲ್ಲಿ ಪಾಲ್ಗೊಂಡಿದ್ದರು.