ಕಾನೂನಿನ ಪ್ರಕಾರವೇ ಜಿಂದಾಲ್‌‌ ಕಂಪನಿಗೆ ಜಮೀನು ಮಾರಾಟ : ಸಚಿವ ಎಂ.ಬಿ.ಪಾಟೀಲ್‌

Update: 2024-08-23 11:51 GMT

ಬೆಂಗಳೂರು: ಜಿಂದಾಲ್ ಉಕ್ಕು ಕಂಪನಿಗೆ ಕೋರ್ಟ್ ನಿರ್ದೇಶನ ಮತ್ತು ಅದನ್ನು ಅನುಸರಿಸಿ ಹೊರಡಿಸಿದ ಸರಕಾರಿ ಆದೇಶ ಹಾಗೂ ಸಂಪುಟ ಸಭೆಯ ನಿರ್ಣಯದಂತೆಯೇ ಕಾನೂನಿಗೆ ಅನುಸಾರವಾಗಿ 3,677 ಎಕರೆ ಭೂಮಿಯನ್ನು ಗುತ್ತಿಗೆ ಮಾರಾಟ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಸರಕಾರದ್ದು ಎಳ್ಳಷ್ಟೂ ತಪ್ಪಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ‌.ಬಿ.ಪಾಟೀಲ್ ಅವರು ಸಮರ್ಥಿಸಿಕೊಂಡಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಖಾನೆ ಹೊಂದಿರುವ ಜಿಂದಾಲ್ ಕಂಪನಿಗೆ ನಾವೇನೂ ರಿಯಾಯಿತಿ ಕೊಟ್ಟಿಲ್ಲ. ಮಾರುಕಟ್ಟೆ ಬೆಲೆ ಹಿಂದೆ ಏನಿದೆಯೋ ಅದನ್ನು ನಿಗದಿಪಡಿಸಿದ್ದೇವೆ. ಕಂಪನಿ ಕೂಡ ಸರಕಾರದ ಷರತ್ತುಗಳನ್ನು ಪಾಲಿಸಿದೆ. ರಾಜ್ಯದಲ್ಲಿ ಇರುವ ಒಂದು ಲಕ್ಷ ಕೈಗಾರಿಕೆಗಳಿಗೆ ಯಾವ ನಿಯಮ ಹೇಳಿದ್ದೇವೋ ಅದನ್ನೇ ಜಿಂದಾಲ್ ಗೂ ಅನ್ವಯಿಸಲಾಗಿದೆ. ವಾಸ್ತವವಾಗಿ ಒಂಬತ್ತು ವರ್ಷಗಳ‌ ಕಾಲ ಇದನ್ನು ವೃಥಾ ಎಳೆದಾಡಿದ್ದೇವೆ" ಎಂದಿದ್ದಾರೆ.

ಇನ್ನು ಆರು ತಿಂಗಳಲ್ಲಿ ರಾಜ್ಯದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದೆ. ಜಿಂದಾಲ್ ರಾಜ್ಯದಲ್ಲಿ 90 ಸಾವಿರ ಕೋಟಿ ರೂ. ಹೂಡಿದ್ದು, 50 ಸಾವಿರ ಉದ್ಯೋಗ ಕೊಟ್ಟಿದೆ. ಇಂತಹ ಸಂದರ್ಭದಲ್ಲಿ ಸರಕಾರದ ಕಡೆಯಿಂದ ಹೂಡಿಕೆದಾರರಿಗೆ ತಪ್ಪು ಸಂದೇಶ ಹೋಗಬಾರದು ಎಂದು ಹೇಳಿದರು.

ಸರಕಾರವು ಉದ್ಯಮಿಗಳಿಗೆ ಜಮೀನು ಕೊಡುತ್ತದೆ. ಅದರಲ್ಲಿ ಹತ್ತು ವರ್ಷಗಳಲ್ಲಿ ಶೇ 51ರಷ್ಟು ಭೂಮಿಯನ್ನು ಅವರು ಬಳಸಿಕೊಂಡು, ಕಂಪನಿಯನ್ನು ಸಕ್ರಿಯವಾಗಿ ಇಟ್ಟಿರಬೇಕು. ಆಗ ಕೈಗಾರಿಕಾ ನೀತಿಯಂತೆ ಗುತ್ತಿಗೆ ಮಾರಾಟ ಮಾಡಲಾಗುತ್ತದೆ. ಇದರಲ್ಲಿ ಜಿಂದಾಲ್ ಎಲ್ಲೂ ಎಡವಿಲ್ಲ ಎಂದು ಅವರು ನುಡಿದರು.

ನಾವು ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಿಂದ ಕೈಗಾರಿಕಾ ಕ್ಷೇತ್ರದಲ್ಲಿ ಭಾರೀ ಪೈಪೋಟಿ ಎದುರಿಸುತ್ತಿದ್ದೇವೆ. ಎಷ್ಟೋ ರಾಜ್ಯಗಳು ಉದ್ದಿಮೆಗಳಿಗೆ ಉಚಿತವಾಗಿ ಭೂಮಿ ಕೊಡುತ್ತಿವೆ. ಹಿಂದೆ ಜಿಂದಾಲ್ ಕಂಪನಿಗೆ ಭೂಮಿಯನ್ನು ಲೀಸ್ ಕಂ ಸೇಲ್ ಮಾಡಲು ಕೆಲವರು ಯಾಕೆ ವಿರೋಧಿಸಿದರೋ ಗೊತ್ತಿಲ್ಲ ಎಂದು ಅವರು ವಿವರಿಸಿದ್ದಾರೆ.

ಹಿಂದೆ ನಾವು ಜಿಂದಾಲ್ ವಿರುದ್ಧವೇನೂ ಪ್ರತಿಭಟಿಸಿಲ್ಲ. ಆಗ ನಾವು ಜನಾರ್ದನ ರೆಡ್ಡಿ ವಿರುದ್ಧವಷ್ಟೇ ದನಿ ಎತ್ತಿದ್ದೆವು. ಜತೆಗೆ ಈಗ ಜಿಂದಾಲ್ ಗೆ ಕೊಡುತ್ತಿರುವ ಭೂಮಿಯಲ್ಲಿ ಗಣಿಗಾರಿಕೆಯೇನೂ ನಡೆಯುತ್ತಿರಲಿಲ್ಲ ಎಂದು ಎಂ.ಬಿ.ಪಾಟೀಲ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯಪಾಲರ ಕಚೇರಿ ಬಿಜೆಪಿ ಕಚೇರಿ ಆಗಿದೆ :

ಮುಡಾ ಹಗರಣದ ವಿಚಾರದಲ್ಲಿ ರಾಜ್ಯಪಾಲರು ಸ್ವಂತ ವಿವೇಚನೆಯಿಂದ ನಡೆದುಕೊಂಡಿಲ್ಲ. ರಾಜಭವನ ಈಗ ಬಿಜೆಪಿ ಕಚೇರಿಯಾಗಿದೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ತಪ್ಪೇನೂ ಇಲ್ಲ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News