ʼಬಾಗಲಕೋಟೆಗೆ ಬಂದು ನಿನ್ನ ಭಾಷೆಯಲ್ಲಿಯೇ ನಿನ್ನ ಸತ್ಯಾಂಶವನ್ನು ಬಿಚ್ಚಿಡುತ್ತೇನೆʼ | ನಿರಾಣಿಗೆ ಏಕವಚನದಲ್ಲೇ ಸವಾಲೆಸೆದ ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು : "ನನ್ನ ಸಂಸ್ಥೆ ಮತ್ತು ನನ್ನ ಕುರಿತು ಏಕವಚನದಲ್ಲಿ ಕೆಟ್ಟ ಭಾಷೆ ಬಳಸಿದ್ದಾನೆ. ನಾನು ವಿಜಯಪುರ ಜಿಲ್ಲೆಯವ. ಇಂಥಹ ಎಲ್ಲ ಭಾಷೆಗಳು ನನಗೂ ಬರುತ್ತವೆ. ನಾನೇ ಸ್ವತಃ ಬಾಗಲಕೋಟೆಗೆ ಬಂದು ನಿನ್ನ ಭಾಷೆಯಲ್ಲಿಯೇ ನಿನ್ನ ಸತ್ಯಾಂಶವನ್ನು ಬಿಚ್ಚಿಡುತ್ತೇನೆ” ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ರವಿವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ, "ಮಿಸ್ಟರ್ ಮುರುಗೇಶ್ ನಿರಾಣಿ ಬಾಗಲಕೋಟೆಯಲ್ಲಿ ನೀನು ಮಾಡಿರುವ ಪತ್ರಿಕಾಗೋಷ್ಠಿಯನ್ನು ಗಮನಿಸಿದ್ದೇನೆ. ಸಿದ್ದಾರ್ಥ ಟ್ರಸ್ಟ್ ಗೆ ಯಾವುದೇ ರಿಯಾಯಿತಿ ಇಲ್ಲದೆ ಸಿಎ ನಿವೇಶನ ನೀಡಿದ್ದರೂ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೆಸರನ್ನು ಅನಾವಶ್ಯಕವಾಗಿ ಎಳೆದು ತಂದು ಹಗರಣವಾಗಿದೆ ಎಂದು ಬಿಜೆಪಿಯವರು ಬಿಂಬಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ನಾನು ಪತ್ರಿಕಾಗೋಷ್ಠಿ ನಡೆಸಿ, ಬಿಜೆಪಿ ಅವಧಿಯಲ್ಲಿ ಬಿಜೆಪಿ ನಾಯಕರು ಯಾರು ಯಾರು ಎಷ್ಟೆಷ್ಟು ಲಾಭ ಪಡೆದಿದ್ದಾರೆ ಎಂಬುದು ತಿಳಿಸುವುದು ನನ್ನ ಉದ್ದೇಶವಾಗಿತ್ತು. ಈ ಸಂದರ್ಭದಲ್ಲಿ ಮಿಸ್ಟರ್ ನಿರಾಣಿ ತನ್ನ ಶಿಕ್ಷಣ ಸಂಸ್ಥೆ ಮತ್ತು ಸಕ್ಕರೆ ಕಾರ್ಖಾನೆಗೆ ಪಡೆದಿರುವ ಲಾಭದ ಮಾಹಿತಿಯನ್ನು ನೀಡಿದ್ದೇನೆ" ಎಂದು ಪೋಸ್ಟ್ ಮಾಡಿದ್ದಾರೆ.
ಆದರೆ, ʼದನಕಾಯುವವನುʼ ಎಂಬ ಶಬ್ದವನ್ನು ನಾನು ಎಲ್ಲಿಯೂ ಬಳಸಿಲ್ಲ ಮತ್ತು ಏಕವಚನದಲ್ಲೂ ನಾನು ಮಾತನಾಡಿಲ್ಲ. ಅಷ್ಟಕ್ಕೂ, ದನಕಾಯುವುದು ಗೌರವದ ಕಾಯಕ. ದನಕಾಯುವವರನ್ನು ನಾನು ಗೌರವಿಸುತ್ತೇನೆ. ಮಿಸ್ಟರ್ ನಿರಾಣಿ ತಾನಾಗಿಯೇ “ದನಕಾಯುವವ” ಎಂದು ತಿಳಿದುಕೊಂಡು, ನನ್ನ ಸಂಸ್ಥೆ ಮತ್ತು ನನ್ನ ಕುರಿತು ಏಕವಚನದಲ್ಲಿ ಕೆಟ್ಟ ಭಾಷೆ ಬಳಸಿದ್ದಾನೆ. ನಾನು ವಿಜಯಪುರ ಜಿಲ್ಲೆಯವ. ಇಂಥಹ ಎಲ್ಲ ಭಾಷೆಗಳು ನನಗೂ ಬರುತ್ತವೆ. ನಾನೇ ಸ್ವತಃ ಬಾಗಲಕೋಟೆಗೆ ಬಂದು ನಿನ್ನ ಭಾಷೆಯಲ್ಲಿಯೇ ನಿನ್ನ ಸತ್ಯಾಂಶವನ್ನು ಬಿಚ್ಚಿಡುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಅನವಶ್ಯಕವಾಗಿ ನನ್ನ ತಂಟೆಗೆ ಬಂದವರಿಗೆ ಹಿಂದೆಯೂ ಬಿಟ್ಟಿಲ್ಲ, ಇಂದು ಮತ್ತು ಮುಂದೆಯೂ ಬಿಡುವುದಿಲ್ಲ. ಅದರ ಕಹಿ ಅನುಭವ ಈ ಹಿಂದೆ ನಿನಗೆ ಆಗಿದೆ ಎನ್ನುವುದನ್ನು ನೆನಪಿಸುತ್ತೇನೆ ಎಂದು ಎಂ.ಬಿ.ಪಾಟೀಲ್ ಎಚ್ಚರಿಸಿದ್ದಾರೆ.