ಬಿಜೆಪಿ ಅವಧಿಯ ಹಗರಣಗಳಿಗೆ ತಾರ್ಕಿಕ ಅಂತ್ಯ ನೀಡುತ್ತೇವೆ : ಸಚಿವ ಎಂ.ಬಿ.ಪಾಟೀಲ್

Update: 2024-09-02 14:57 GMT

ಬೆಂಗಳೂರು : ಬಿಜೆಪಿ ಸರಕಾರದ ಅವಧಿಯಲ್ಲಿನ ಎಲ್ಲಾ ಹಗರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು. ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಹಗರಣ, ಪಿಎಸ್‍ಐ, ಬಿಟ್ ಕಾಯಿನ್ ಹಗರಣ ಸೇರಿದಂತೆ ಎಲ್ಲವನ್ನೂ ತನಿಖೆಗೆ ಒಳಪಡಿಸಿದ್ದು, ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೋವಿಡ್ ಸಂದರ್ಭದಲ್ಲಿನ ಹಗರಣಗಳಿಗೆ ಹಿಂದಿನ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರೇ ಹೊಣೆಗಾರರಾಗಿದ್ದಾರೆ. ಈ ಹಗರಣಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ಮುಖ್ಯಮಂತ್ರಿ ಸ್ವೀಕರಿಸಿದ್ದು, ಶೀಘ್ರ ಕ್ರಮ ಜರುಗಲಿದೆ ಎಂದು ಅವರು ಹೇಳಿದರು.

ವೈದ್ಯಕೀಯ ಕಾಲೇಜುಗಳ ನಿರ್ಮಾಣದಲ್ಲಿ ಏಕಾಏಕಿ ಹಲವಾರು ಪಟ್ಟು ಯೋಜನಾ ವೆಚ್ಚವನ್ನು ಹೆಚ್ಚಿಸಲಾಗಿದೆ. ಸುಮಾರು 15-20 ಸಚಿವ ಸಂಪುಟ ಸಭೆಗಳಲ್ಲಿ ಈ ಬಗ್ಗೆ ನಿರಂತರ ಚರ್ಚೆಯಾಗಿದೆ. 300-400 ಕೋಟಿ ರೂ. ಏಕಾಏಕಿ ಹೆಚ್ಚಿಸುವ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ನಮ್ಮ ಅನಿವಾರ್ಯತೆಗಳು ಹೇಗಿದ್ದವು ಎಂದರೆ, ಅವರ ಕಾಲದಲ್ಲಿ ಮಾಡಿದ್ದ ಭ್ರಷ್ಟಾಚಾರ ಕಣ್ಣೆದುರಿಗೇ ಇದ್ದರೂ ಬಾಕಿ ಉಳಿದ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವ ಪರಿಸ್ಥಿತಿ ಎದುರಾಗಿತ್ತು. ಇಲ್ಲವಾದರೆ ಕಾಮಗಾರಿ ಅರ್ಧಕ್ಕೇ ನಿಲ್ಲುತ್ತಿತ್ತು. ಯೋಜನೆ ವ್ಯರ್ಥವಾಗುತ್ತಿತ್ತು. ಜನರಿಗೆ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಾಕಿ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕಾಗಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ಸ್ವಂತ ವಿವೇಚನೆಯಿಂದ ಕೆಲಸ ಮಾಡಿಲ್ಲ: ಮುಡಾ ಹಗರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡುವಾಗ ಸ್ವಂತ ವಿವೇಚನೆಯಿಂದ ಕೆಲಸ ಮಾಡಿಲ್ಲವೆಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಕೇಂದ್ರ ಸರಕಾರ ಹಾಗೂ ಬಿಜೆಪಿ ಅಣತಿಯಂತೆ ವರ್ತಿಸುತ್ತಿದ್ದಾರೆ. ರಾಜಭವನ ಚಲೋ ನಡೆಸಿ ನಾವು ರಾಜ್ಯಪಾಲರನ್ನು ಭೇಟಿ ಮಾಡಿದಾಗ ಶಶಿಕಲಾ ಜೊಲ್ಲೆ ಪ್ರಕರಣವನ್ನು ಇತ್ಯರ್ಥಪಡಿಸಲಾಗಿದೆ. ಉಳಿದ ಮೂರು ಪ್ರಕರಣಗಳ ಅಭಿಯೋಜನೆಗೆ ಪೂರ್ವಾನುಮತಿ ಕೇಳಿದ್ದ ಕಡತಕ್ಕೆ ಸ್ಪಷ್ಟನೆ ಕೇಳಿ ವಾಪಸ್ ಕಳುಹಿಸಿರುವುದಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಕಡತಗಳಿನ್ನೂ ರಾಜ್ಯಪಾಲರ ಬಳಿಯೇ ಉಳಿದುಕೊಂಡಿವೆ ಎಂದು ಎಂ.ಬಿ.ಪಾಟೀಲ್ ವಿವರಿಸಿದರು.

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ. ಹೀಗಾಗಿ ನ್ಯಾಯಾಲಯದಲ್ಲಿ ಜಯ ಸಿಗುವ ವಿಶ್ವಾಸವಿದೆ. ಮತ್ತಷ್ಟು ಶಕ್ತಿಶಾಲಿಯಾಗಿ ಸಿದ್ದರಾಮಯ್ಯ ಹೊರಹೊಮುತ್ತಾರೆ. ಆರ್.ವಿ.ದೇಶಪಾಂಡೆ ಸೇರಿದಂತೆ ಹಲವು ಮಂದಿ ಮುಖ್ಯಮಂತ್ರಿಯಾಗುವ ಕುರಿತು ಹೇಳಿಕೆ ನೀಡಿರುವುದು ಸಾಂದರ್ಭಿಕ ಅಷ್ಟ್ರೇ. ನಾನು ಕೂಡ ಈ ಮೊದಲು ಇಂತಹ ಹೇಳಿಕೆ ನೀಡಿದ್ದೇನೆ. ಆದರೆ, ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಮುಖ್ಯಮಂತ್ರಿ ಬದಲಾವಣೆ ಎಂಬುದು ಹಗಲು ಕನಸು. ಅದು ಸಾಧ್ಯವಿಲ್ಲ ಎಂದು ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸುದೀರ್ಘ ರಾಜಕೀಯ ಅನುಭವವಿದ್ದು, ರಾಜ್ಯ ರಾಜಕಾರಣಕ್ಕೆ ಮರಳಲಿದ್ದಾರೆ ಎಂಬುದು ಹಲವರ ಆಧಾರರಹಿತ ಹೇಳಿಕೆಯಾಗಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News