ನೀರಿನ ಸುರಕ್ಷಿತ ಭವಿಷ್ಯಕ್ಕೆ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಶೃಂಗಸಭೆ : ಸಚಿವ ಪ್ರಿಯಾಂಕ್ ಖರ್ಗೆ

Update: 2024-10-08 15:27 GMT

ಬೆಂಗಳೂರು : ರಾಜ್ಯದ ಗ್ರಾಮೀಣ ಭಾಗ ಎದುರಿಸುತ್ತಿರುವ ಕುಡಿಯವ ನೀರು ಹಾಗೂ ನೈರ್ಮಲ್ಯದ ಸಮಸ್ಯೆಗೆ ಪರಿಹಾರ ಒದಗಿಸುವ ವಿನೂತನ ಆಲೋಚನೆಗಳಿಗೆ ವೇದಿಕೆಯಾಗಲಿರುವ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸುಸ್ಥಿರತೆಯ ಶೃಂಗಸಭೆಯನ್ನು ಅ.29ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

‘ಗ್ರಾಮೀಣ ಭಾಗದಲ್ಲಿ ನೀರಿನ ನೈರ್ಮಲ್ಯತೆಯ ಭವಿಷ್ಯ ನಿರ್ಮಾಣಕ್ಕೆ ನಾವಿನ್ಯತೆ ಬಳಕೆ’ ಶೀರ್ಷಿಕೆಯಡಿ ಮಾಹಿತಿ ತಂತ್ರಜ್ಞಾನ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಈ ಶೃಂಗಸಭೆಯನ್ನು ಏರ್ಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಹೊಸ ತಂತ್ರಜ್ಞಾನ ಬಳಸಿಕೊಂಡು ತ್ಯಾಜ್ಯ ನಿರ್ವಹಣೆ, ನೀರಿನ ಮಾಲಿನ್ಯವನ್ನು ಪತ್ತೆಹಚ್ಚುವುದು (ರಾಸಾಯನಿಕ, ಜೈವಿಕ ಇತ್ಯಾದಿ), ಕೈಗಾರಿಕಾ ಅಭಿವೃದ್ಧಿಗೆ ಉದಯೋನ್ಮುಖ ತಂತ್ರಜ್ಞಾನಗಳನ್ನು ಮೌಲ್ಯಮಾಪನ ಮಾಡುವುದು ಸಭೆಯ ಮುಖ್ಯ ಉದ್ದೇಶಗಳಾಗಿವೆ. ಜಲ ಮಾಲಿನ್ಯ, ಜಲಸಂಪನ್ಮೂಲ ನಿರ್ವಹಣೆ, ನೀರಿನ ಗುಣಮಟ್ಟ ನಿರ್ವಹಣೆ, ನೀರಿನ ಶುದ್ಧೀಕರಣ ಘಟಕಗಳು ಮತ್ತು ನೀರಿನ ಉತ್ಪಾದನೆಯ ಕುರಿತು ಪೈಲಟ್ ಆಧಾರದ ಮೇಲೆ ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ನಾವೀನ್ಯತೆ ಯೋಜನೆಗಳಿಗೆ ಧನಸಹಾಯ, ನೈರ್ಮಲ್ಯ ಸೌಲಭ್ಯಗಳನ್ನು ಸುಧಾರಿಸಿ ಮತ್ತು ನೀರಿನ ಬಳಕೆಯನ್ನು ಕಡಿಮೆ ಮಾಡಲು, ತ್ಯಾಜ್ಯವನ್ನು ಸಂಸ್ಕರಿಸಲು ಪರಿಸರ ಸ್ನೇಹಿ ನೈರ್ಮಲ್ಯ ತಂತ್ರಜ್ಞಾನಗಳನ್ನು ಅನ್ವೇಷಿಸಲಾಗುತ್ತದೆ. ಈ ಶೃಂಗಸಭೆಯ ಮೂಲಕ ಸರಕಾರ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕಾರ್ಯಸಾಧ್ಯವಾದ ಪರಿಹಾರವನ್ನು ಅನ್ವೇಷಿಸಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕರ್ನಾಟಕ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಶೃಂಗಸಭೆಯು ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಕೊರತೆ ಮತ್ತು ನೈರ್ಮಲ್ಯದ ಸವಾಲುಗಳ ನವೀನ ತಾಂತ್ರಿಕ ಪರಿಹಾರಗಳನ್ನು ಗುರುತಿಸಲು ಮತ್ತು ಉತ್ತೇಜಿಸಲು ಸಮರ್ಪಿಸಲಾಗಿದೆ. ಈ ಶೃಂಗಸಭೆಯಲ್ಲಿ ಪ್ರತಿಷ್ಠಿತ ಉದ್ಯಮದ ಮುಖಂಡರು, ಉದ್ಯಮಿಗಳು ಮತ್ತು ಸಂಶೋಧಕರನ್ನು ಒಗ್ಗೂಡಿಸಿ, ಅವರ ಆಲೋಚನೆ ಹಾಗೂ ಅಭಿಪ್ರಾಯಗಳ ವಿನಿಮಯವನ್ನು ಉತ್ತೇಜಿಸುವುದು ರಾಜ್ಯದ ಧ್ಯೇಯವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ಶೃಂಗಸಭೆಯ ಮೂಲಕ, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅನ್ವೇಷಿಸಿ, ಹಣಕಾಸು ಮತ್ತು ಪಾಲುದಾರಿಕೆಗಳನ್ನು ಸುಲಭಗೊಳಿಸಿ ಶುದ್ಧ ನೀರು ಮತ್ತು ಪರಿಣಾಮಕಾರಿ ನೈರ್ಮಲ್ಯ ವ್ಯವಸ್ಥೆಗಳಿಗೆ ಸಮರ್ಥನೀಯವಾಗಿ ಬಳಸಿಕೊಳ್ಳಲು ಸಂಪನ್ಮೂಲಗಳನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿದ್ದೇವೆ. ಈ ಸುಸ್ಥಿರ ಅಭಿವೃದ್ಧಿಗೆ ಇದು ಅತ್ಯಗತ್ಯವಾಗಿರುವುದರಿಂದ ರಾಜ್ಯವು ನವೀನ ಪರಿಹಾರಗಳೊಂದಿಗೆ ಗ್ರಾಮೀಣ ಸಮುದಾಯಗಳನ್ನು ಸಬಲೀಕರಣಗೊಳಿಸಲು ಬಯಸುತ್ತದೆ ಎಂದು ಅವರು ತಿಳಿಸಿದ್ದಾರೆ.

25 ಲಕ್ಷ ರೂ. ಬಹುಮಾನ: ಗ್ರಾಮೀಣ ಭಾಗದ ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ವಿನೂತನ ಆಲೋಚನೆ ಹೊಂದಿರುವವರಿಂದ ಅರ್ಜಿ ಆಹ್ವಾನಿಸಲಾಗಿದೆ. ತಮ್ಮ ಬಳಿ ನವೀನ ಆಲೋಚನೆ ಇರುವ ನವೋದ್ಯಮಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು. ಶೃಂಗಸಭೆಯಲ್ಲಿ ತಮ್ಮ ಆಲೋಚನೆಗಳನ್ನು ಪ್ರಸ್ತುತ ಪಡಿಸುವ ಸ್ಪರ್ಧಾಳುಗಳಿಗೆ ವಿಶೇಷ ಅಧಿವೇಶನ ನಡೆಸಲಾಗುವುದು, ಅಲ್ಲಿ ಆಯ್ದ ನವೋದ್ಯಮ ವಿಜೇತರು ಕನಿಷ್ಠ 25 ಲಕ್ಷ ರೂ.ಗಳನ್ನು ಬಹುಮಾನವಾಗಿ ಪಡೆಯಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಅರ್ಜಿ ಸಲ್ಲಿಕೆಯ ವಿವರಗಳು: ಆಸಕ್ತರು ತಮ್ಮ ಪ್ರಸ್ತಾವನೆಗಳನ್ನು ಪಿಚ್ ಡೆಕ್ ಪ್ರಸ್ತಾವನೆಯೊಂದಿಗೆ ಅರ್ಜಿ ಸಲ್ಲಿಸಬಹುದು. ಗುಣಮಟ್ಟ ಆಧರಿಸಿ ಅಪ್ಲಿಕೇಶನ್‍ಗಳನ್ನು ಆಯ್ಕೆ ಮಾಡಲಾಗುತ್ತದೆ, ಅಂತಿಮವಾಗಿ ಶೃಂಗಸಭೆಯಂದು ಆಯ್ದ ನವೋದ್ಯಮಗಳು ತಮ್ಮ ಆಲೋಚನೆಯನ್ನು ಪ್ರಸ್ತುತ ಪಡಿಸಲು ಅವಕಾಶ ಹೊಂದಿರುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಶೃಂಗಸಭೆ, ಅರ್ಜಿ ವಿವರಗಳು ಮತ್ತು ಸಮಸ್ಯೆ ಹೇಳಿಕೆಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ಲಿಂಕ್ ಬಳಸಿ ಪಡೆಯಬಹುದು.

https://docs.google.com/forms/d/e/1FAIpQLSfNRpFtUndG4F-6WY02IVEG5ejkM5Zz1dOC2lb7-qubwWzUfg/viewform?usp=sf_link

ಮೊಬೈಲ್ ಸಂಖ್ಯೆ 9902844998 ಅಥವಾ ಇಮೇಲ್ ವಿಳಾಸ gm4kits@gmail.com ಮೂಲಕ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News