‘ನೀರು ಸರಬರಾಜು ವ್ಯವಸ್ಥೆಯಲ್ಲಿ ಲೋಪವಾಗದಂತೆ ಕ್ರಮ ಕೈಗೊಳ್ಳಿ’ : ಜಿ.ಪಂ. ಸಿ.ಇ.ಒಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ
ಪ್ರಿಯಾಂಕ್ ಖರ್ಗೆ
ಬೆಂಗಳೂರು : ಬೇಸಿಗೆಯ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರು ಸರಬರಾಜು ವ್ಯವಸ್ಥೆಯಲ್ಲಿ ಕಿಂಚಿತ್ತು ಲೋಪವಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಕುಡಿಯುವ ನೀರು ಸರಬರಾಜು ಸಂಬಂಧ ಹಲವು ಸೂಚನೆಗಳನ್ನು ನೀಡಿದರು.
ಕಳೆದ ವರ್ಷದ ಸಮಸ್ಯೆಗಳನ್ನು ಅವಲೋಕನ ಮಾಡಿ: ಕಳೆದ ವರ್ಷ ಜಿಲ್ಲೆಗಳಲ್ಲಿ ಉದ್ಭವಿಸಿದ್ದ ಸಮಸ್ಯೆಗಳನ್ನು ಅವಲೋಕನ ಮಾಡಿ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ ಪ್ರಿಯಾಂಕ್ ಖರ್ಗೆ, ಕೊಳವೆ ಬಾವಿಗಳ ದುರಸ್ತಿ, ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯುವುದು, ವಾಹನಗಳ ಮೂಲಕ ನೀರು ಸರಬರಾಜು ಸೇವೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿಗಳು ಹಾಗೂ ಇತರ ಇಲಾಖೆಗಳ ಅಧಿಕಾರಿಗಳ ಜೊತೆ ಸಮನ್ವಯ ಸಭೆಗಳನ್ನು ನಡೆಸಬೇಕು, ತಾಲ್ಲೂಕು ಪಂಚಾಯತಿಗಳ ನಿರ್ವಹಣಾಧಿಕಾರಿಗಳು, ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಂಜನಿಯರುಗಳು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಜೊತೆ ನಿರಂತರ ಸಭೆಗಳನ್ನು ನಡೆಸಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ನಿಗಾ ವಹಿಸಬೇಕು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ನೀರು ಹಾಗೂ ವಿದ್ಯುತ್ ಸರಬರಾಜಿನಲ್ಲಿ ಸುಸ್ಥಿರತೆ ಕಾಪಾಡಿಕೊಳ್ಳಬೇಕು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಲು ಈಗಾಗಲೆ ನಿರ್ದೇಶನ ನೀಡಿದ್ದು, ಯಾವುದೇ ಲೋಪವಾಗದಂತೆ ಈ ಸೂಚನೆಗಳನ್ನು ಪಾಲಿಸಬೇಕೆಂದು ಅವರು ಅಧಿಕಾರಿಗಳಿಗೆ ತಿಳಿಸಿದರು.
ಇ-ಸ್ವತ್ತು ಸಮಿತಿ ಬಂದಾಗ ಮಾಹಿತಿ ನೀಡಿ: ಇ-ಸ್ವತ್ತು ಅನುಷ್ಠಾನಕ್ಕಾಗಿ ಸಮಿತಿ ರಚಿಸಲಾಗಿದ್ದು, ಸಮಿತಿಯ ಸದಸ್ಯರು ಪ್ರವಾಸ ಮಾಡಿ ಮಾಹಿತಿ ಸಂಗ್ರಹಿಸಲಿದ್ದಾರೆ, ಆ ಸಂದರ್ಭದಲ್ಲಿ ಸಮಿತಿಗೆ ಮಾಹಿತಿ ನೀಡಲು ಕ್ರಮ ವಹಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಕಳೆದ ಸಾಲಿನ ಕಾರ್ಯಕ್ರಮಗಳನ್ನು ಕಾರ್ಯಗತ ಮಾಡಲು ಹಾಗೂ ಹೊಸ ವರ್ಷದ ಆಯವ್ಯಯದ ಯೋಜನೆಗಳನ್ನು ಅನುಷ್ಠಾನಗೊಳಿಸಲು ನೀಲಿನಕ್ಷೆ ತಯಾರಿಸಲು ಅಧಿಕಾರಿಗಳು ಆದ್ಯತೆ ನೀಡಬೇಕು. ಈ ವರ್ಷ ತೆರಿಗೆ ಸಂಗ್ರಹ ತೃಪ್ತಿದಾಯಕವಾಗಿದ್ದು, ಇದಕ್ಕಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ವರ್ಷ ಮತ್ತಷ್ಟು ಉತ್ಸಾಹದಿಂದ ತೆರಿಗೆ ಸಂಗ್ರಹಿಸಿ ಗುರಿ ತಲುಪುವಂತೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಝ್, ಗ್ರಾಮೀಣ ನೀರು ಸರಬರಾಜು ಇಲಾಖೆಯ ನಿರ್ದೇಶಕ ಕೆ.ನಾಗೇಂದ್ರ ಪ್ರಸಾದ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.