ಲೋಕಾಯುಕ್ತ ವಿಚಾರಣೆಗೆ ಹಾಜರಾದ ಸಚಿವ ಝಮೀರ್ ಅಹ್ಮದ್ ಖಾನ್

Update: 2024-12-03 13:41 GMT

ಝಮೀರ್ ಅಹ್ಮದ್ ಖಾನ್

ಬೆಂಗಳೂರು : ಆದಾಯಕ್ಕೂ ಮೀರಿ ಹಣ ಸಂಪಾದನೆ ಪ್ರಕರಣ ಸಂಬಂಧ ವಸತಿ ಹಾಗೂ ವಕ್ಫ್ ಇಲಾಖೆ ಸಚಿವ ಝಮೀರ್ ಅಹ್ಮದ್ ಖಾನ್ ಲೋಕಾಯುಕ್ತ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದರು.

ಇತ್ತೀಚೆಗೆ ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಹಿನ್ನೆಲೆಯಲ್ಲಿ ಮಂಗಳವಾರ ಝಮೀರ್ ಅಹ್ಮದ್ ಖಾನ್ ಅವರು ತಮ್ಮ ವಕೀಲರೊಂದಿಗೆ ಲೋಕಾಯುಕ್ತ ಅಧಿಕಾರಿಗಳ ಮುಂದೆ ವಿಚಾರಣೆ ಎದುರಿಸಿದರು.

ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಝಮೀರ್ ಅಹ್ಮದ್ ಖಾನ್, ಈಗಾಗಲೇ ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ನೋಟಿಸ್ ನೀಡಲಾಗಿತ್ತು. ಆದರೆ, ಕೆಲಸದ ಒತ್ತಡದಿಂದ ಬರಲು ಸಾಧ್ಯವಾಗಿರಲಿಲ್ಲ. ಮಂಗಳವಾರ ಮಧ್ಯಾಹ್ನ ವಿಚಾರಣೆಗೆ ಹಾಜರಾಗಿ ತನಿಖಾಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ಮತ್ತೆ ಅವಶ್ಯಕತೆ ಇದ್ದರೆ ಕರೆಯುತ್ತೇವೆ ಎಂದಿದ್ದಾರೆ ಎಂದರು.

ಏನಿದು ಪ್ರಕರಣ?: ಅಸಮತೋಲಿತ ಆಸ್ತಿ ಗಳಿಕೆ ಆರೋಪದಡಿ 2022ರಲ್ಲಿ ಜುಲೈ 5ರಂದು ಝಮೀರ್ ಅಹ್ಮದ್ ಅವರ ಮನೆ, ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

ಅದಕ್ಕೂ ಮುನ್ನ 2021ರಲ್ಲಿ ಜಾರಿ ನಿರ್ದೇಶಾಲಯ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಆದಾಯಕ್ಕಿಂತ 2030ರಷ್ಟು ಹೆಚ್ಚು ಆಸ್ತಿ ಸಂಪಾದನೆ ಮಾಡಿರುವುದನ್ನ ಪತ್ತೆ ಹಚ್ಚಿದ್ದರು. ಈ ಬಗ್ಗೆ ಈಡಿ ಅಂದಿನ ಎಸಿಬಿಗೆ ಪತ್ರ ಬರೆದು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಬೇಕೆಂದು ಸೂಚಿಸಿತ್ತು. ಇದೀಗ ಎಸಿಬಿ ರದ್ದು ಬಳಿಕ ಲೋಕಾಯುಕ್ತ ಅಧಿಕಾರಿಗಳು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News