ಸ್ಪೀಕರ್ ಪೀಠದ ಘನತೆಗೆ ಧಕ್ಕೆ ತರುವ ಹೇಳಿಕೆ ; ಶಾಸಕ ಹರೀಶ್ ಪೂಂಜ ವಿರುದ್ದ ದೂರು

ಹರೀಶ್ ಪೂಂಜಾ/ಯು.ಟಿ.ಖಾದರ್
ಬೆಂಗಳೂರು: ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ವಿರುದ್ದ ಆಕ್ಷೇಪಾರ್ಹ ಹಾಗೂ ಸ್ಪೀಕರ್ ಪೀಠದ ಘನತೆಗೆ ಧಕ್ಕೆ ತರುವ ಹೇಳಿಕೆ ನೀಡಿದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಧಾನಸಭೆಯ ಸರಕಾರಿ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ವಿಧಾನಸಭೆ ಹಕ್ಕು ಬಾಧ್ಯತೆ ಸಮಿತಿಗೆ ದೂರು ನೀಡಿದ್ದಾರೆ.
ಮಂಗಳವಾರ ಹಕ್ಕು ಬಾಧ್ಯತೆ ಸಮಿತಿಗೆ ಅಶೋಕ್ ಪಟ್ಟಣ್ ದೂರು ನೀಡಿದ್ದು, ‘ಬಿಜೆಪಿ ಶಾಸಕ ಹರೀಶ್ ಪೂಂಜ ಅವರು ಖಾಸಗಿ ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ‘ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಧರ್ಮದ ಹೆಸರಿನಲ್ಲಿ ಪಕ್ಷಪಾತದ ಧೋರಣೆ ಅನುಸರಿಸಿದ್ದಾರೆಂದು ಆಪಾದನೆ ಮಾಡಿದ್ದಾರೆ. ಅಲ್ಲದೆ, ಸ್ಪೀಕರ್ ಪೀಠದ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸಿದ್ದಾರೆ. ಆ ಮೂಲಕ ಸ್ಪೀಕರ್ ಪೀಠದ ನಿಷ್ಪಕ್ಷಪಾತತೆಗೆ ಕಳಂಕ ತಂದಿದ್ದಾರೆ. ಅಲ್ಲದೆ, ಪೀಠದ ಘನತೆಗೆ ಕುಂದು ತಂದಿದ್ದಾರೆ’ ಎಂದು ಉಲ್ಲೇಖಿಸಿದ್ದಾರೆ.
ಹಕ್ಕು ಬಾಧ್ಯತಾ ಸಮಿತಿಗೆ ದೂರು ನೀಡಿದ ಬಳಿಕ ಮಾತನಾಡಿದ ಸಚೇತಕ ಅಶೋಕ್ ಪಟ್ಟಣ್, ಸ್ಪೀಕರ್ ಪೀಠಕ್ಕೆ ಅಗೌರವ ತಂದ ಹಿನ್ನೆಲೆಯಲ್ಲಿ 2025ರ ಮಾರ್ಚ್ 21ರಂದು ಬಿಜೆಪಿಯ 18 ಮಂದಿ ಶಾಸಕರನ್ನು ಅಮಾನತ್ತು ಮಾಡಲಾಗಿದೆ. ಈ ವಿಚಾರವನ್ನು ಉಲ್ಲೇಖಿಸಿ ಶಾಸಕ ಹರೀಶ್ ಪೂಂಜ ಖಾಸಗಿ ಸುದ್ದಿವಾಹಿನಿಗೆ ಸಂದರ್ಶನ ನೀಡಿದ್ದಾರೆ. ಆ ಸಂದರ್ಶನದಲ್ಲಿ ಸ್ಪೀಕರ್ ವಿರುದ್ಧ ಆಕ್ಷೇಪಾರ್ಹ ಹಾಗೂ ಪೀಠದ ಘನತೆಗೆ ಚ್ಯುತಿ ತರುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ.
ಅಲ್ಲದೆ, ಸ್ಪೀಕರ್ ಅವರ ಧರ್ಮದ ವಿಚಾರದ ರೀತಿ ಮಾತನಾಡುವ ಮೂಲಕ ಸ್ಪೀಕರ್ ಖಾದರ್ ಅವರು ನೀಡಿದ ರೂಲಿಂಗ್ ಅನ್ನು ಪ್ರಶ್ನಿಸಿದ್ದಾರೆ. ಇದು ಸ್ಪೀಕರ್ ಪೀಠಕ್ಕೆ ಮಾಡಿದ ಅವಮಾನ. ಹೀಗಾಗಿ ಇದನ್ನು ಹಕ್ಕು ಬಾಧ್ಯತೆ ಸಮಿತಿ ಗಮನಕ್ಕೆ ತಂದಿದ್ದೇವೆ. ಶಾಸಕ ಹರೀಶ್ ಪೂಂಜ ವಿಚಾರದ ಬಗ್ಗೆ ವಿಚಾರಣೆಗೊಳಪಡಿಸಬೇಕು ಎಂದು ಕೋರಿ ದೂರು ನೀಡಿದ್ದೇವೆ ಎಂದು ಪಟ್ಟಣ್ ಮಾಹಿತಿ ನೀಡಿದರು.