ಐದು ವರ್ಷದಲ್ಲಿ 3,350ಕ್ಕೂ ಹೆಚ್ಚು ಬಾಣಂತಿಯರ ಸಾವು : ಸಿಎಂ ಕಚೇರಿಯಿಂದ ಅಧಿಕೃತ ಮಾಹಿತಿ ಬಿಡುಗಡೆ
ಬೆಂಗಳೂರು : ಕಳೆದ ಐದು ವರ್ಷಗಳಲ್ಲಿ ರಾಜ್ಯ ವ್ಯಾಪಿ 3,350ಕ್ಕೂ ಹೆಚ್ಚು ಬಾಣಂತಿಯರ ಸಾವು ಸಂಭವಿಸಿದ್ದು, ಈಗಿನ ಅವಧಿಯಲ್ಲಿ ಸಾವುನೋವು ಕಡಿಮೆಯಾಗಿದೆ ಎಂದು ಪ್ರತಿಪಕ್ಷಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಕಿ-ಅಂಶಗಳ ಮೂಲಕ ತಿರುಗೇಟು ನೀಡಿದ್ದಾರೆ.
ಸೋಮವಾರ ಈ ಕುರಿತು ಸಿಎಂ ಕಚೇರಿಯಿಂದ ಬಾಣಂತಿಯರ ಸಾವಿನ ಬಗ್ಗೆ ಅಂಕಿ- ಅಂಶಗಳನ್ನು ಬಿಡುಗಡೆ ಮಾಡಿದ್ದು, ಕಳೆದ ಐದು ವರ್ಷಗಳಲ್ಲಿ ಒಟ್ಟು 3,364 ಬಾಣಂತಿಯರು ಮೃತಪಟ್ಟಿದ್ದಾರೆ.
ಅಂಕಿ-ಅಂಶಗಳ ಪ್ರಕಾರ, ಬಿಜೆಪಿ ಅಧಿಕಾರದಲ್ಲಿದ್ದಾಗ ಕೋವಿಡ್ -19 ಸಮಯದಲ್ಲಿ ಸಂಭವಿಸಿದ ಅತಿ ಹೆಚ್ಚು ತಾಯಂದಿರ ಸಾವುಗಳನ್ನು ಬಹಿರಂಗಪಡಿಸಿದೆ. ಅದರಲ್ಲೂ, 2019-2020 ರಲ್ಲಿ, 662 ತಾಯಂದಿರ ಸಾವುಗಳು ವರದಿಯಾಗಿದ್ದು, ನಂತರದ ವರ್ಷದಲ್ಲಿ ಈ ಸಂಖ್ಯೆ 714ಕ್ಕೆ ಸ್ವಲ್ಪ ಏರಿಕೆಯಾಗಿದೆ.
2021-2022 ರಲ್ಲಿ 595 ಬಾಣಂತಿಯರ ಸಾವು, 2022-2023 ರಲ್ಲಿ 527 ಮತ್ತು 2023-2024 ರಲ್ಲಿ 518 ಸಾವುಗಳು ದಾಖಲಾಗಿವೆ. ಪ್ರಸ್ತುತ ಸಾಲಿನ ನವೆಂಬರ್‌ನಲ್ಲಿ ತಾಯಂದಿರ ಸಾವಿನ ಸಂಖ್ಯೆ 348 ರಷ್ಟಿದೆ ಎಂದು ಮಾಹಿತಿ ಹಂಚಿಕೊಂಡಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಇತ್ತೀಚಿನ ಬಾಣಂತಿಯರ ಸಾವಿನ ಕುರಿತು ಪ್ರತಿಪಕ್ಷ ಬಿಜೆಪಿ ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಆಸ್ಪತ್ರೆ ಮತ್ತು ರಾಜ್ಯಾದ್ಯಂತ ಇತರ ಸ್ಥಳಗಳಲ್ಲಿ ಬಾಣಂತಿಯರ ಸಾವಿನ ಕುರಿತು ತನಿಖೆಗಾಗಿ ನಾಲ್ಕು ಸದಸ್ಯರ ಸಮಿತಿಯನ್ನು ರವಿವಾರ ರಚಿಸಿದೆ.